ಮೊದಲ ತೊದಲು ಮಾತು

ಈ ಬರವಣಿಗೆ ಹಾಗೂ ಓದು ನನಗೆ ಯಾವಾಗಲೂ ಪ್ರಿಯ. ಆದರೆ ಪ್ರಮಾದವೆಂದರೆ ನನ್ನ ಬರವಣಿಗೆಗೆ ಬಗ್ಗೆ ನನಗೆ ಅನುಮಾನ. ನನ್ನ ಓಡುವ ಮನಸ್ಸಿನ ಹೆಜ್ಜೆ ಗುರುತುಗಳನ್ನು, ಈ ಲೇಖನಿ ಜಾಡು ಹಿಡಿದು ನಡೆಯಬಲ್ಲದಾ ಎಂದು? ಮನಸ್ಸಿನ ನೂರಾರು ಮುಖಗಳನ್ನು ಸೆರೆಹಿಡಿಯಬಲ್ಲದಾ? ನವರಸಗಳನ್ನೂ, ಭಾವಗಳನ್ನೂ ಧ್ವನಿಸಬಲ್ಲದಾ? ಈ ಪ್ರಶ್ನೆಗಳನ್ನು ಪುನ: ಪುನ: ಕೆಳಿಕೊಳ್ಳುತ್ತೇನೆ.ಬರೆಯುವ ಮೊದಲು ಈ ಪ್ರಶ್ನೆಗಳು ಕಾಡುತ್ತವೆ. ಆ ಕಾರಣಕ್ಕಾಗಿಯೇ ಬರೆಯುವದು ಬಹಳ ಪ್ರಯಾಸಕರ ಎಂದೆನಿಸುತ್ತದೆ. ಕ್ರಮೆಣ ನನ್ನ ಬರವಣಿಗೆ ಗೊತ್ತು ಗುರಿಯಿಲ್ಲದೆ ಸಾಗಬಹುದಾ ಎಂಬ ಆತಂಕ ಕಾಡುತ್ತದೆ. ಬರೆಯುವಾಗ ಬಹುಮುಖ್ಯವಾಗಿ ಕಾಡುವ ಪ್ರಶ್ನೆ ಎಂದರೆ 'ಬರಹಗಾರನು ತನ್ನ ಬರಹವನ್ನು ನೈತಿಕತೆಯ ಮೌಲ್ಯಾಧಾರಿತವಾಗಿ ಬರೆಯಬೇಕಾ?' ಎಂಬುದು.ಇದಕ್ಕೆ ನನ್ನ ಬಳಿಯೂ ಸರಿಯಾದ ಉತ್ತರವಿಲ್ಲ. ಆದರೆ ರಿಚರ್ಡ್ ಪೋಸ್ನರ್(ಅಮೆರಿಕಾದ ಕಾನೂನು ತಜ್ನ) ಪ್ರಕಾರ ಬರಿವಣಿಗೆಯಲ್ಲಿ ಕೇವಲ ಪಾತ್ರಗಳ ರೂಪಣೆಯಷ್ಟೆ ಮುಖ್ಯ, ವೈಚಾರಿಕತೆ ಹಾಗೂ ನೈತಿಕ ನೆಲೆಗಟ್ಟು ಮುಖ್ಯ ಆಗಿರಲೇಬೇಕು ಎಂದಿಲ್ಲ ಎಂದು ಅಭಿಪ್ರಾಯ ಪಡುತ್ತಾರೆ. ಆದರೆ ಅದಕ್ಕೆ ವಿರುದ್ದವಾಗಿ ವಿಚಾರವಾದಿಗಳಲ್ಲಿ ಒಬ್ಬರಾದ Martha Nussbahm ಇದಕ್ಕೆ ವಿರುದ್ಧವಾಗಿ ವಾದಿಸುತ್ತಾರೆ. ಇದು ತುಂಬಾ ಮಹತ್ವದ್ದಲ್ಲವೆನಿಸಿದರೂ ನನಗಂತೂ ತುಂಬಾ ಗಂಭೀರ ಚಿಂತನೆ ಎನಿಸುತ್ತದೆ. ಅದೇನೇ ಇರಲಿ, ಬಹುಷಃ ಬರೆಯುವ ಪ್ರತಿಯೊಬ್ಬನೂ ವೈಚಾರಿಕತೆಯ ನೆಲೆಗಟ್ಟಿನಲ್ಲಿ ಬರೆದರೆ, ಹಾಗೂ ಆತ/ಆಕೆ ಆ ನೈತಿಕ ಮೌಲ್ಯಗಳಿಗೆ ಬದ್ಧನಾಗಿದ್ದರೆ ಸಾಹಿತ್ಯ ಜಗತ್ತಿನಲ್ಲಿ ಬಹಳ ಉತ್ತಮ ವಾತಾವರಣವಿರುತ್ತಿತ್ತು. ನಾನೂ ಕೂಡ ಸಾಧ್ಯವಾದಷ್ಟರ ಮಟ್ಟಿಗೆ ಸತ್ಯವನ್ನು ಬರೆಯಬೇಕೆಂದು ಅಂದುಕೊಂಡಿದ್ದೇನೆ (ಸಾಹಿತಿಯಲ್ಲದಿದ್ದರೂ).ಬರೆಯಲು ವಿಷಯಗಳು ಬಹಳಷ್ಟಿವೆ.ಅವುಗಳನ್ನು ಪ್ರತ್ಯೆಕಿಸಲಾರದಷ್ಟು ಸಂದಿಗ್ದತೆಯೂ ಕಾಡುತ್ತದೆ.
 ಆದರೆ ನನಗೆ ಬರವಣಿಗೆಯಲ್ಲಿ ಬಹಳ ಇಷ್ಟವಾಗುವದು ಸತ್ಯ ಸಂಶೋಧನೆ, ವಾದ, ತರ್ಕ. ಅದಿಲ್ಲದಿದ್ದರೆ ಓದು/ಬರವಣಿಗೆ ನೀರಸ ಎನಿಸುತ್ತದೆ. ಪ್ರಶಾಂತತೆಯನ್ನು ಇಷ್ಟಪಟ್ಟರೂ ಅದನ್ನು ಕದಡಿ ಮತ್ತೊಮ್ಮೆ ಪ್ರಶಾಂತತೆಗೆ ಹಿಂತಿರುಗುವಿಕೆಯನ್ನು ನೋಡಬಯಸುತ್ತೇನೆ. ಒಂದೊಂದು ಸಲ ಅನಿಸುತ್ತದೆ; ಕೆಲವು ವರ್ಷಗಳ ಹಿಂದೆ ಹೇಗಿದ್ದೆ?ಆಲೋಚನೆಯ ಧಾಟಿ ಹೇಗಿತ್ತು? ಈಗ ಹೇಗಾದೆ?ಎಂಬುದರ ಬಗ್ಗೆಲ್ಲ introspection ಮಾಡಿಕೊಳ್ಳಬೇಕೆನಿಸುವ ಹುಚ್ಚು ಆಲೋಚನೆ ಬರುತ್ತದೆ. ಈಗ ಬರೆಯುತ್ತಿರುವ ಕಾರಣಗಳಲ್ಲಿ ಅದೂ ಒಂದು. ಹಲವು ವರ್ಷಗಳ ನಂತರ ನನ್ನನ್ನು ನಾನು 'ಭೂತ' ಕನ್ನಡಿಯಲ್ಲಿ ನೋಡಿಕೊಳ್ಳಬೇಕೆಂದು. ಹೀಗೆ ಅಂದುಕೊಳ್ಳುವಾಗ ಥಟ್ಟನೆ ನೆನಪಾಗುವದು ರನ್ನ ಹಾಗೂ ಆತನ ಗುರುಗಳಾದ ಲಲಿತಕೀರ್ತಿ ಪಂಡಿತರ ನಡೆದ ಮಾತುಕತೆ. ಸಾಹಿತ್ಯವನ್ನು ಕಲಿಯುತ್ತಿರುವಾಗಲೇ ರನ್ನ ಒಮ್ಮೆ ಉತ್ಸುಕತೆಯಿಂದ ತನ್ನ ಮೊದಲ ಕಾವ್ಯವನ್ನು ಗುರುಗಳಾದ ಪಂಡಿತರಿಗೆ ತೋರಿಸಿ "ಹೇಗಿದೆ ಗುರುಗಳೇ" ಎಂದು ಕೇಳುತ್ತಾನೆ. ಅದಕ್ಕೆ ಗುರುಗಳು "ಇದನ್ನು ಬೆಂಕಿಯಲ್ಲಿ ಸುಟ್ಟು ದೂರದ ಹೊಳೆಗೆ ಎಸೆದು ಬಾ" ಎಂದು ಆದೇಶಿಸುತ್ತಾರೆ. ಯಾಕೆಂದರೆ ಅವರ ನಿಲುವಿನ ಪ್ರಕಾರ ಸಂಪೂರ್ಣ ವಿದ್ಯೆಯನ್ನು ಕಲಿಯದೇ ಅದರ ಪ್ರದರ್ಶನ ಒಡ್ಡಬಾರದು ಎಂದು. ಇದನ್ನು ನೆನೆಸಿಕೊಂಡಾಗಲೆಲ್ಲ ಕೇವಲ ಮನಸ್ಸಿನ ಚಾಪಲ್ಯಕ್ಕೊಸ್ಕರ ಬರೆವ ಅರೆ-ಬರೆ ಜ್ಞಾನವನ್ನು ವ್ಯಕ್ತಪಡಿಸುವ ಬರವಣಿಗೆ ವ್ಯರ್ಥ ಎಂದೆನಿಸುತ್ತದೆ. ಅದೇನೇ ಇರಲಿ. ಏನು ಬರೆಯಬೇಕೆಂದು ಏನೂ ಅಂದುಕೊಂಡಿಲ್ಲ. ಆದರೂ ತೋಚಿದ್ದನ್ನು ಬರೆಯುತ್ತೇನೆ.

Comments