ಅಂಬೇಡ್ಕರ್ ರ ’ಹಿಂದುತ್ವ’ ವನ್ನು ಅರಸುತ್ತಾ-ಭಾಗ ೧


ಇಂದು ಡಾ. ಅಂಬೇಡ್ಕರರನ್ನು ಒಬ್ಬ ಹಿಂದೂ ದೇಶಭಕ್ತರೆಂದು ಕರೆದರೆ ಜನ ಹೇಗೆ ಪ್ರತಿಕ್ರಿಯಿಸಬಹುದು? ಖಂಡಿತ ಗಲಿಬಿಲಿಯಾಗುತ್ತಾರೆ. ಇದೊಂದು ಮನುವಾದಿಯ ಕುತಂತ್ರ ಎಂದು ಕೋಪಿಸಿಕೊಳ್ಳಬಹುದು. ಆದರೆ ಯಾವ ಮಟ್ಟಿಗೆ ಅಂಬೇಡ್ಕರರ ವ್ಯಕ್ತಿತ್ವ ನಮ್ಮಿಂದ ಮರೆಮಾಚಲ್ಪಟ್ಟಿದೆ ಎಂದರೆ, ಅಂಬೇಡ್ಕರ್ ಎಂದರೆ ಕೆಳಜಾತಿಗೆ ಮೀಸಲು ಎನ್ನುವ ಕೆಲ ವರ್ಗಗಳ ಧೋರಣೆಯಾದರೆ ಅವರೊಬ್ಬ ಬ್ರಾಹ್ಮಣ ವಿರೋಧಿ ಎಂದು ಅವರನ್ನು ಉಪೇಕ್ಷಿಸುವ ವರ್ಗ ಇನ್ನೊಂದು ಕಡೆ ಇದೆ. ಆದರೆ ಇಂದಿನ ವರ್ತಮಾನ ರಾಜಕೀಯದಲ್ಲಿ ಅಂಬೇಡ್ಕರರ ಹಕ್ಕು ಸ್ವಾತಂತ್ರ್ಯವನ್ನು ಹೊತ್ತವರೆಂಬಂತೆ ಅವರ ಉತ್ತರಾಧಿಕಾರಿಗಳೆಂದು ಕರೆದುಕೊಳ್ಳುವ ಮನೊ ವೈಕಲ್ಯರ ಹುಚ್ಚಾಟ, ತಿಕ್ಕಲುತನಗಳಿಂದ ಅದೆ ಸ್ಟೀರಿಯೋಟೈಪಿನಿಂದ ಅಂಬೇಡ್ಕರರನ್ನು ನೋಡಬೇಕಾದ ಪರಿಸ್ಥಿತಿ ಬಂದಿರುವದರಿಂದ ಅವರಲ್ಲಿನ ಭವ್ಯ, ಗಂಭೀರ, ಪ್ರಭುದ್ಧ ವ್ಯಕ್ತಿತ್ವ ಹಾಗೂ ದಾರ್ಶನಿಕತೆ ಅಕ್ಷರಶಃ ಮರೆಯಾಗಿರುವದು ಅತ್ಯಂತ ದುರದೃಷ್ಟಕರ. ಅದೇ ಅವರ ಕನಸು ನನಸಾಗದಿರುವದಕ್ಕೂ ಕಾರಣ.
ಹಿಂದೂ ಸಂಪ್ರದಾಯದಲ್ಲಿನ ಜಾತಿಗಳ ಬಗ್ಗೆ ಅವರ ಸಂಶೋಧನೆ ನಮಗೆ ತಿಳಿದದ್ದು ಅತ್ಯಲ್ಪ.ಅರವಿಂದನ್ ನೀಲಕಂದನ್ ಅವರ ’Bodhisattva's hindutva(part 1-6 )' ವನ್ನು ಓದಿದಾಗ ಅಂಬೇಡ್ಕರರಲ್ಲಿದ್ದ ಸಮಗ್ರ ಹಿಂದುತ್ವ ನನ್ನ ತಿಳುವಳಿಕೆಗೆ ಬಂದಿದ್ದು. ಅದನ್ನು ಆಯ್ದು, ಸಂಕ್ಷಿಪ್ತವಾಗಿ ಈ ಲೇಖನವನ್ನು ಬರೆದಿದ್ದೇನೆ.
ಜಾತಿ ಪದ್ದತಿಗಳ ವಿರುದ್ಧ ಅಂಬೇಡ್ಕರರು ಹೋರಾಡಿದರು ಎಂಬುದು ಎಲ್ಲರಿಗೂ ತಿಳಿದ ಸತ್ಯ. ಆದರೆ ಜಾತಿಗಳ ವಿರುದ್ಧ ಅವರ ಹೋರಾಟವು ಅವರ ಕನಸಿನ ಹಿಂದೂ ಧರ್ಮವೇ ಆಗಿತ್ತು ಎಂಬುದು ನಿರ್ವಿವಾದ. ತಮ್ಮ 'Annihilation of caste'(page no.30) ಯಲ್ಲಿ ಅವರು ಹೇಳಿದ್ದು ಹೀಗೆ "ಎಲ್ಲಿಯವರೆಗೆ ಜಾತಿಗಳು ಇರುವದೊ ಅಲ್ಲಿಯವರೆಗೆ ಸಂಘಟನೆ ಸಾಧ್ಯವಿಲ್ಲ.ಎಲ್ಲಿಯವರೆಗೆ ಸಂಘಟನೆ ಸಾಧ್ಯವಿಲ್ಲವೋ ಅಲ್ಲಿಯವರೆಗೆ ಹಿಂದೂ ಧರ್ಮವು ದುರ್ಬಲವಾಗಿಯೇ ಇರುವದು". ೧೯೨೭ ರಲ್ಲಿ ದಲಿತರಿಗೆ ದೇವಾಲಯದ ಪ್ರವೇಶದ ಹಕ್ಕಿನ ಬಗ್ಗೆ ಪ್ರಸ್ತಾಪಿಸಿ ಅವರು ಹೇಳಿದ್ದು ಹೀಗಿದೆ "ಹಿಂದುತ್ವವು ಸ್ಪಶ್ಯೃ ಹಾಗೂ ಅಸ್ಪಶ್ಯೃ ಎಲ್ಲರಿಗೂ ಸೇರಿದುದಾಗಿದೆ. ಕೇಳಜಾತಿಗೆ ಸೇರಿದ್ದ ವಾಲ್ಮಿಕಿ, ವ್ಯಾಧಗೀತ, ಚೋಕಮೇಳ ಮತ್ತು ರೋಹಿದಾಸರುಗಳು ಹಿಂದು ಧರ್ಮಕ್ಕೆ ನೀಡಿದ ಕೊಡುಗೆಯು, ಬ್ರಾಹ್ಮಣರಾದ ವಸಿಷ್ಟ, ಕ್ಷತ್ರಿಯರಾಗಿದ್ದ ಕೃಷ್ಣ, ವೈಶ್ಯರಾಗಿದ್ದ ಹರ್ಷ, ಹಾಗೂ ಶೂದ್ರರಾಗಿದ್ದ ತುಕಾರಮರುಗಳು ನೀಡಿದ ಕೊಡುಗೆಯಷ್ಟೆ ಮಹತ್ವಪೂರ್ಣವಾದುದು" ( ’ಬಹಿಷ್ಕೃತ್ ಭಾರತ್’ ದಲ್ಲಿ). ಇಲ್ಲಿ ಅವರ ಆಧುನಿಕ ಹಿಂದೂ ಧರ್ಮವನ್ನು ಕಟ್ಟುವ ಮನೋಭಾವ ಹಾಗೂ ಸಂಘಟನೆಯ ಬಗೆಗಿನ ಆಸ್ಥೆಯನ್ನು ಗುರುತಿಸಬಹುದು. ತಮ್ಮ ಸಂವಿಧಾನದಲ್ಲಿ, ಸಾಂಸ್ಕೃತಿಕವಾಗಿ ಒಂದೆ ತಳಹದಿಯ ಮೇಲೆ ನಿಂತಿರುವದರಿಂದ ಸಿಖ್, ಜೈನ್, ಬೌದ್ಧ, ಲಿಂಗಾಯಿತ, ವೈಷ್ಣವರೆಲ್ಲರನ್ನೂ ಹಿಂದೂ ಎಂಬ ಒಂದೆ ಧರ್ಮದ ಕಾನೂನಿನಡಿಯಲ್ಲಿ ನಿರೂಪಿಸಿದ್ದರು.
ಅಂಬೇಡ್ಕರರರು ವಿ.ಡಿ ಸಾವರ್ಕರ್, ಹಾಗೂ ಆರ್ಯ ಸಮಾಜದ ಶ್ರದ್ಧಾನಂದರುಗಳ ಜೊತೆ ಬಹಳ ಆತ್ಮೀಯತೆಯನ್ನು ಹೊಂದಿದ್ದರು.ಅದಕ್ಕೆ ಕಾರಣ ಸಾವರ್ಕರ್ ಹಾಗೂ ಶ್ರದ್ಧಾನಂದರುಗಳು ಹಿಂದೂ ಧರ್ಮವನ್ನು ಕಟ್ಟಲು ಹಿಂದೂ ಸಂಪ್ರದಾಯದಲ್ಲಿನ ಅಸ್ಪಶ್ಯೃತೆಯ ವಿರುದ್ಧ ಹೋರಾಡಿದ್ದು. ತಮ್ಮ ’ಜನತಾ’ ಮ್ಯಾಗಜಿನ್ ನಲ್ಲಿ ಸಾವರ್ಕರರ ಹೋರಾಟವನ್ನು ಪ್ರಶಂಸಿಸಿದ್ದರು. ಅಷ್ಟೆ ಅಲ್ಲ ಸಾವರ್ಕರರನ್ನು ಗಾಂಧಿಜಿಯ ಹತ್ಯೆಯ ಪ್ರಕರಣದಲ್ಲಿ ಆರೋಪಿ ಸ್ಥಾನದಲ್ಲಿ ನಿಲ್ಲಿಸಿದಾಗ ಅವರ ಬೆಂಬಲಕ್ಕಿದ್ದರು(ಮನೋಹರ್ ಮಲ್ಗಾಂವ್ಕರ್ ಅವರ ‘The Men Who Killed Gandhi’ (1978) ಯಲ್ಲಿ ಉಲ್ಲೇಕವಾಗಿದೆ). ತಮ್ಮ ಕೃತಿಯಾದ ’‘What Congress and Gandhi Have Done to the Untouchables’ ನಲ್ಲಿ ಕಾಂಗ್ರೆಸ್ ಹಾಗೂ ಗಾಂಧಿಜಿಯವರ ಅಸ್ಪಶ್ಯೃರ ಬಗೆಗಿನ ನಡೆಯನ್ನು ಟೀಕಿಸುತ್ತಾ, ಸ್ವಾಮಿ ಶ್ರದ್ಧಾನಂದರ ಹೋರಾಟವನ್ನು ಪ್ರಶಂಸಿಸಿ ’The Swami was the greatest and the most sincere champion of the Untouchables” ’(ಸ್ವಾಮಿ ಶ್ರದ್ಧಾನಂದರು ಅಸ್ಪಶ್ಯೃರ ಶ್ರೇಷ್ಟ ಹಾಗೂ ಪ್ರಾಮಾಣಿಕ ಗೆಲುವುದಾರ) ಎಂದು ಉಲ್ಲೇಕಿಸಿದ್ದಾರೆ.
೧೯೩೯ ರಲ್ಲಿ ಅಂಬೇಡ್ಕರರು ಆರ್.ಎಸ್.ಎಸ್ ಕ್ಯಾಂಪ್ ಗೆ ಭೇಟಿ ನೀಡಿದ್ದಾಗ ಅಲ್ಲಿ ಜಾತಿ ಭೇದವಿಲ್ಲದೆ ಎಲ್ಲರೂ ಒಂದಾಗಿ ಕಾರ್ಯ ನಿರ್ವಹಿಸುತ್ತಿರುವದನ್ನು ನೋಡಿ, ತುಂಬು ಹೃದಯದಿಂದ ಹೇಳಿದ್ದು ಹೀಗೆ."ಸ್ವಯಂ ಸೇವಕರು ಜಾತಿ ಭೇದವಿಲ್ಲದೆ ಸಮಾನತೆ ಹಾಗೂ ಭಾತೃತ್ವದಿಂದ ಬೆರೆತು ಓಡಾಡುತ್ತಿರುವದನ್ನು ನೋಡಿದರೆ ಬಹಳ ಸಂತೋಶವಾಗುತ್ತದೆ"
ಆದರೆ ನಮ್ಮಲ್ಲಿ ಇವತ್ತು ಅನೇಕರು ೧೯೩೫ ರಲ್ಲಿ ಅವರು ಮಾಡಿದ ಒಂದು ಮಾತನ್ನು ಉಲ್ಲೇಕಿಸುತ್ತಾರೆ  "ನಾನು ಹಿಂದುವಾಗಿ ಹುಟ್ಟಿದ್ದೇನೆ ಆದರೆ ಹಿಂದುವಾಗಿ ಸಾಯಲಾರೆ" ಎಂದು. ನಿಜ, ಅವರು ಹಿಂದೂ ಧರ್ಮದಲ್ಲಿದ್ದ ಅನೇಕ ನ್ಯೂನ್ಯತೆಗಳನ್ನು ಟೀಕಿಸಿದ್ದರು. ಆದರೆ ಅವರು ಹಿಂದೂ ಎನ್ನುವ ಶಬ್ದವನ್ನು ಎರಡು ರೀತಿಯಲ್ಲಿ ಉಲ್ಲೇಕಿಸಿದ್ದರು ಎನ್ನುವದು ಸ್ಪಷ್ಟ. ಸ್ಮೃತಿಗಳಲ್ಲಿನ ಶಾಸ್ತ್ರಗಳಿಂದ ವಿಧಿಸಲ್ಪಟ್ಟ ಜಿಡ್ಡು ಸಂಪ್ರದಾಯಗಳ ಹಿಂದುತ್ವವನ್ನು ವಿರೋಧಿಸಿದರು ಹಾಗೂ ಆಧ್ಯಾತ್ಮಿಕ ತತ್ವಗಳಲ್ಲಿನ ಹಿಂದುತ್ವವನ್ನು ಪ್ರೀತಿಸಿದ್ದರು, ಉಪನಿಶತ್ತಿನಲ್ಲಿನ ಅದ್ವೈತ ವನ್ನು(ಅದಕ್ಕೆ ಅವರು BBrahmaism' ಎಂದು ಕರೆದಿದ್ದಾರೆ) ಮುಕ್ತವಾಗಿ ಹೆಮ್ಮೆಯಿಂದ ಉಲ್ಲೇಕಿಸಿದ್ದಾರೆ. ತಮ್ಮ ’Annihilation of castes' ಪುಸ್ತಕದಲ್ಲಿ ಹೀಗೆ ಉಲ್ಲೇಕಿಸಿದ್ದಾರೆ.
"...ಧಾರ್ಮಿಕ ತತ್ವಗಳಲ್ಲಿ ಅಡಕವಾಗಿರಬೇಕಾದ ಸ್ವಾತಂತ್ರ್ಯ, ಭಾತೃತ್ವ, ಸಮಾನತೆ ಯ ತತ್ವಗಳನ್ನು ನಾವು ಹೊರದೇಶದವರಿಂದ ಕಲಿಯಬೇಕಿಲ್ಲ, ಅವು ನಮ್ಮ ಉಪನಿಷತ್ತುಗಳಲ್ಲೆ ಇವೆ"(ಪೇಜ್ ನಂ.೫೨ )
"..ಉಪನಿಷತ್ತಿನಲ್ಲಿನ ’ಬ್ರಹ್ಮ’ ತತ್ವಗಳು ಬೋಧಿಸುವ ’ಪ್ರಜಾಪ್ರಭುತ್ವ’ ತತ್ವಗಳನ್ನು ಜಗತ್ತಿನ ಬೇರೆ ಯಾವುದೆ ಧಾರ್ಮಿಕ ಗ್ರಂಥಗಳೂ ಬೋಧಿಸಲಾರವು ಎಂಬುದರಲ್ಲಿ ಸಣ್ಣ ಅನುಮಾನವೂ ಇಲ್ಲ"  (ಪೇಜ್ ನಂ. ೨೧೮).
ಭಾರತ ಹಾಗೂ ಪಾಕಿಸ್ಥಾನ ವಿಭಜನೆಯನ್ನು ಅವರು ಅಪೇಕ್ಷಿಸಿದ್ದರು. ಯಾಕೆಂದರೆ ಹಿಂದು ಮುಸ್ಲೀಮರು ವಿಭಜನೆಯಾದರೆ ಮಾತ್ರ ಹಿಂದುಗಳು ಸ್ವತಂತ್ರವಾಗಿ ಬದುಕಬಹುದೆಂದು, ಇಲ್ಲದಿದ್ದರೆ ಮುಸ್ಲೀಮರೆ ಆಡಳಿತ ನಡೆಸುವಂತಾಗುತ್ತದೆ ಎಂದಿದ್ದರು(Thoughts on linguistic states page no.16). ಹಿಂದೂ ಮತ್ತು ಬೌದ್ಧ ಧರ್ಮಗಳು ಒಂದೆ ತಳಹದಿಯ ಮೇಲೆ ನಿಂತಿರುವದನ್ನು ಅವರು ಮನಗಂಡಿದ್ದರು. "ಭಾರತ ಹಾಗೂ ಪಾಕಿಸ್ಥಾನಗಳ ನಡುವಿನ ಐಕ್ಯತೆ ಬರಿಯ ಸುಳ್ಳು, ಭಾರತ ಹಾಗೂ ಬರ್ಮಾ ಗಳ ನಡುವೆ ಇರುವ ಆಧ್ಯಾತ್ಮಿಕ ಐಕ್ಯತೆ ಭಾರತ ಮತ್ತು ಪಾಕಿಸ್ಥಾನದ ನಡುವೆ ಇಲ್ಲ" ಎಂದು ಹೇಳಿದ್ದಾರೆ.(Thoughts on Pakistan, Thacker & Co., 1941, p.60). ಇದರರ್ಥ ಬೌದ್ಧಧರ್ಮವನ್ನು ಯಾವತ್ತಿಗೂ ಅವರು ಹಿಂದೂ ಧರ್ಮದಿಂದ ಪ್ರತ್ಯೇಕವಾಗಿ ನೋಡಲಿಲ್ಲ. ಬದಲಾಗಿ ಹಿಂದೂ ಧರ್ಮದ ಶುದ್ಧ ರೂಪವನ್ನು ಬೌದ್ಧ ಧರ್ಮದಲ್ಲಿ ನಿರೀಕ್ಷಿಸಿದರು ಅಷ್ಟೆ. ಹಿಂದೂ ಅಥವಾ ಬೌದ್ಧ ಧರ್ಮಕ್ಕೆ ಉಳಿದ ರಿಲಿಜಿಯನ್ ಗಳಂತೆ ಪ್ರತ್ಯೇಕ ಚೌಕಟ್ಟು ಅಥವಾ ರಿಲಿಜಿಯನ್ ಗಳ ಗುಣಲಕ್ಷಣಗಳೆ ಇಲ್ಲದಿದ್ದಾಗ ಬೌದ್ಧಧರ್ಮಕ್ಕೆ ಅವರ ಮತಾಂತರವನ್ನು ಕೂಡ ಹಿಂದೂ ಧರ್ಮದ ಆದರ್ಶವನ್ನು ಹುಡುಕಿಕೊಂಡು ಹೋದ ಪರಿ ಎನ್ನಬಹುದೆ ಹೊರತು Baptism ನ ಹಿನ್ನೆಲೆಯಲ್ಲಿ ನೋಡಲು ಸಾಧ್ಯವಿಲ್ಲ. 
ಅಂಬೇಡ್ಕರರು ವೈದಿಕ ಕಾಲದಲ್ಲಿ ಹೆಂಗಸರಿಗೆ ಉಪನಯನ ಸಂಸ್ಕಾರ, ಸ್ವಾತಂತ್ರ್ಯ, ಹಾಗೂ ಶಿಕ್ಷಣ ಇತ್ತೆಂದು ಗಾರ್ಗಿ, ಮೈತ್ರೆಯಿ ಹಾಗೂ ವಿಧ್ಯಾಧರಿಗಳ ಉದಾರಣೆಗಳನ್ನು ಕೊಟ್ಟು ಹೇಳುತ್ತಾರೆ. ಹಾಗೂ ವೈದಿಕ ಕಾಲವು ಜಾತಿಯತೆಯಿಂದ ಹೊರತಾಗಿತ್ತೆಂದೂ ಅವರು ಹೇಳಿದ್ದನ್ನು ಗಮನಿಸಬಹುದು(Writings and Speeches, Vol 3, p.432, and p. 122). ಕೇವಲ ಬೌದ್ಧದರ್ಮ ಮಾತ್ರವಲ್ಲ, ಮನುಸ್ಮೃತಿಗಿಂತಲೂ ಹಿಂದೆ ಇದ್ದ ವೈದಿಕ ಕಾಲವೂ ಶುದ್ಧ ರೂಪದ ಆದರ್ಶ ಹಿಂದೂ ಧರ್ಮವನ್ನು ಹೊಂದಿತ್ತು, ಆದರೆ ನಂತರ ಬಂದ ಮನುಸ್ಮೃತಿಯಿಂದ ಅದು ನಾಶವಾಯಿತೆಂದು ಅಭಿಪ್ರಾಯ ಪಡುತ್ತಾರೆ. .(quoted in Vasant Moon p.192).
ಧನಂಜಯ್ ಖೀರ್ ಅವರು ಬರೆದ ’Dr. Ambedkar: Life and Mission’ ನಲ್ಲಿ ಹೀಗೊಂದು ಪ್ರಸಂಗವನ್ನು ಪ್ರಸ್ತಾಪಿಸಿದ್ದಾರೆ. ಒಮ್ಮೆ ವಯಸ್ಸಾದ ಭಕ್ತರೊಬ್ಬರು ಅಂಬೇಡ್ಕರರ ಬಳಿ ಗಣೇಶನ ವಿಗ್ರಹವನ್ನು ಹೊತ್ತು ತರಲು ಕೇಳಿಕೊಂಡನಂತೆ. ಅದಕ್ಕೆ ಅಂಬೇಡ್ಕರರು ನಗುತ್ತಾ ಅಂದರಂತೆ "ನಿಮಗ್ಯಾರು ನಾನು ದೇವರನ್ನು ನಂಬುವದಿಲ್ಲವೆಂದು ಹೇಳಿದ್ದು? ನಡೆಯಿರಿ ಹೋಗೋಣ" ಎಂದರಂತೆ. ಹಿಂದುತ್ವವನ್ನು ತ್ಯಜಿಸಿದ್ದರೆ ಇದು ಸಾಧ್ಯವಿತ್ತೆ?
ಇಷ್ಟೆಲ್ಲ ಅವರ ಜ್ನಾನ ಭಾರತೀಯ ಸಂಸ್ಕೃತಿಯ ಬಗೆಗಿನ ಸಂಶೋಧನೆಗಳನ್ನು ಗಮನಿಸಿದಾಗ ಇಂದು ಅವರು ಚಿತ್ರಿಸಲ್ಪಟ್ಟಿರುವ ರೀತಿ ಅವರನ್ನು ಅರ್ಥ ಮಾಡಿಕೊಳ್ಳಲು ವಿಫಲವಾಗಿದೆ ಎನಿಸದೆ ಇರದು. ಅಂಬೇಡ್ಕರರೇ ಸ್ವತಃ ತಳ್ಳಿ ಹಾಕಿದ ಹಾಗೂ ಇಂದು ಅವೈಜ್ನಾನಿಕವೆಂದು ಸಾಬೀತಾಗಿರುವ ಆರ್ಯ-ದ್ರಾವಿಡ(Aryan Invasion Theory) ಯನ್ನು ಅವರ ಹಿಂಬಾಲಕರು ಇನ್ನೂ ಭದ್ರವಾಗಿ ನಂಬಿಕೊಂಡಿದ್ದಾರೆಂದರೆ ಅಂಬೇಡ್ಕರರ ವಿಶಾಲ ಬುದ್ಧಿಮತ್ತೆ ಅವರ ಅನುಯಾಯಿಗಳಿಗೆ ಸಿದ್ಧಿಸಿಲ್ಲವೆಂದೆ ಅರ್ಥ. ಅಂಬೇಡ್ಕರರ ಹಿಂದೂ ಧರ್ಮದ ಆಧ್ಯಾತ್ಮಿಕ ತತ್ವಗಳ ಮೇಲಿನ ಅಪಾರ ಪ್ರೀತಿ ಹಾಗೂ ಜಾತಿಗಳನ್ನು ನಾಶ ಮಾಡಿ ಸಮಾನತೆಯಡಿಯಲ್ಲಿ ಹಿಂದೂ ಧರ್ಮವನ್ನು ಕಟ್ಟಬೇಕೆಂದುಕೊಂಡ ಅವರ ಆದರ್ಶಗಳನ್ನು ಮರೆಮಾಚಿ ಅಂಬೇಡ್ಕರರ ವಾರಸುದಾರರಂತೆ ಕೆಲವು ಮತಾಂಧ ಲೇಖಕರುಗಳು ಅವರನ್ನು ಬೆಂಬಲಿಸುವ ಸೋಗಿನಲ್ಲಿ ಹಿಂದುತ್ವವನ್ನು ಒಡೆದು ಆಳುವ ಕುತಂತ್ರ ಬುದ್ಧಿಯನ್ನು ತೋರಿಸುತ್ತಿದ್ದಾರೆ. ಇಂತಹ ಆಟಕ್ಕೆ ಅಂಬೇಡ್ಕರರ ದೂರದರ್ಶಿತ್ವದ ಬಗೆಗೆ ತಿಳುವಳಿಕೆಯೆ ಇಲ್ಲದ ಕೆಲವು ದಲಿತರು ಬಲಿಯಾಗುತ್ತಿರುವದು ಒಂದು ಕಡೆಯಾದರೆ, ರಾಜಕೀಯ ದಾಳಕ್ಕೆ ಬಲಿಪಶುಗಳಾಗುತ್ತಿರುವದು ಇನ್ನೊಂದು ದುರಂತ. ಅಂಬೇಡ್ಕರರ ಹಿಂದುತ್ವದ ಕನಸು ನನಸಾಗಲಿ, ಹಾಗೆಯೆ ತಮ್ಮ ಧಾರ್ಮಿಕ ಅಸಹಿಷ್ಣುತೆಗನುಗುಣವಾಗಿ ಅವರನ್ನು ಗುತ್ತಿಗೆಗೆ ತೆಗೆದುಕೊಂಡ ಮತಾಂಧ ಪತ್ರಕರ್ತರ ಪ್ರಯತ್ನಗಳು ವಿಫಲವಾಗಲಿ.
 

Comments

Post a Comment