ಅಂಬೇಡ್ಕರರು ನಮ್ಮ ಸಂವಿಧಾನದ ರಚನಾಕಾರರೆ?

ಬಹುಶಃ ಇದನ್ನು ನಾವೆಲ್ಲರೂ  ಒಮ್ಮೆ ಪಠ್ಯದಲ್ಲಿ ಓದಿದ್ದೇವೆ. ಕಂಠಪಾಠ ಮಾಡಿದ್ದೇವೆ. ಅದು ಎಷ್ಟೆಂದರೆ 'ಭಾರತದ ಸಂವಿಧಾನ' ಎಂದ ತಕ್ಷಣ ನಮ್ಮ ಕಣ್ಣ ಮುಂದೆ ನಿಲ್ಲುವದು ಅಂಬೇಡ್ಕರರ ಭಾವಚಿತ್ರ. ಇದು ಈ ಮಟ್ಟಿಗೆ ನಮ್ಮಲ್ಲಿ ಬೇರೂರಲು ಕಾರಣಗಳಿವೆ. ಪ್ರಾಥಮಿಕ ಶಿಕ್ಷಣದಿಂದ ಮಾಧ್ಯಮಿಕ(ಹೈಸ್ಕೂಲು) ಶಿಕ್ಷಣದವರೆಗೆ ಎಲ್ಲಾ ತರಗತಿಗಳಲ್ಲಿ ಮೂರು ಭಾಷಾ ವಿಷಯಗಳಲ್ಲಿ ನಾವು ಅಧ್ಯಯನ ಮಾಡಿದ ಏಕೈಕ ವ್ಯಕ್ತಿ ಎಂದರೆ ಅಂಬೇಡ್ಕರರೆ ಎಂದರೆ ತಪ್ಪಾಗಲಾರದು. ಹೈಸ್ಕೂಲಿನಲ್ಲಿರುವಾಗ ನಮ್ಮ ಅಧ್ಯಾಪಕರೊಬ್ಬರು  ತಮಾಷೆ ಮಾಡುತ್ತಿದ್ದರು. ಅವರು ಅಂಬೇಡ್ಕರರ ಬಗ್ಗೆ ಪಾಠ ಮಾಡಲು ಶುರುವಿಟ್ಟುಕೊಳ್ಳುತ್ತಿದ್ದಂತೆ ಮಕ್ಕಳು 'ಸರ್' ಎನ್ನುತ್ತಾ ಕೈ ಎತ್ತುತ್ತಿದ್ದರಂತೆ. ಅದಾಗಲೇ ಆ ಪಾಠದ ಪ್ರಶ್ನೆಗಳಿಗೆ ಉತ್ತರಗಳನ್ನು ಸಿದ್ಧಪಡಿಸಿಟ್ಟುಕೊಳ್ಳುತ್ತಿದ್ದರಂತೆ. ಆದರೆ ಇಲ್ಲಿ ಒಂದು ಸೋಜಿಗದ ಸಂಗತಿಯೂ ಇದೆ. ನಾವು ಅಂಬೇಡ್ಕರರ ಬಗ್ಗೆ ಹೆಚ್ಚು ಓದಿರುವದು ಭಾಷಾ ವಿಷಯಗಳಲ್ಲಿ ಮಾತ್ರ. ಅವರ ಕೊಡುಗೆಯ ಬಗ್ಗೆ ಹೆಚ್ಚು ತಿಳಿದುಕೊಳ್ಳಬೇಕಾದ ವಿಷಯವಾದ 'ಸಮಾಜ ವಿಜ್ಞಾನ'ದಲ್ಲಿನಾವು ತಿಳಿದುಕೊಂಡಿರುವದು ಕಡಿಮೆ. 'ಸಂವಿಧಾನದ ರಚನೆಯಲ್ಲಿ ನಿರ್ಧಾರಗಳನ್ನು ಕೈಗೊಳ್ಳುವಲ್ಲಿ ಅಂಬೇಡ್ಕರರ ಪಾತ್ರ ಎಷ್ಟಿತ್ತು?', 'ಅವರು ಸ್ವತಂತ್ರವಾಗಿ ನೀಡಿದ ಯಾವ ಸಲಹೆಗಳು ಇಂದಿನ ಸಂವಿಧಾನದಲ್ಲಿ ಅಡಕವಾಗಿದೆ? ಹಾಗೂ ಅದರಿಂದ ಇಂದಿನ ಸಮಾಜದಲ್ಲಾದ ಬೆಳವಣಿಗೆಗಳೇನು?' ಎಂಬಂತಹ ವಿಚಾರಗಳನ್ನು ತಿಳಿಸಬೇಕಾದ ಸಮಾಜ ವಿಜ್ನಾನದ ಪುಸ್ತಕ 'ಅಂಬೇಡ್ಕರರು ನಮ್ಮ ಸಂವಿಧಾನದ ಪಿತಾಮಹ ', 'ಸಂವಿಧಾನ ಶಿಲ್ಪಿ' ಇತ್ಯಾದಿ ಅಲಂಕಾರ, ರೂಪಕಗಳ ಮೂಲಕ ಅಂಬೇಡ್ಕರರನ್ನು ನಮಗೆ ಪರಿಚಯಿಸಿಬಿಡುತ್ತದೆ. ಸಾಮಾಜಿಕ ತಾಣಗಲಲ್ಲಿ ಈ ವ್ಯಕ್ತಿತ್ವ ವೈಭವ ಜಾಸ್ತಿಯೇ ಇದೆ. ಕೆಲವು ಅಂಬೇಡ್ಕರ್ ವಾದಿಗಳ ಪ್ರಕಾರ, ಅಂಬೇಡ್ಕರರು, ಭಾರತದ ಸಂವಿಧಾನವನ್ನು ರಚಿಸಿ, ಮನುವಾದಿಗಳಿಂದ ದಲಿತರನ್ನು ಬಿಡುಗಡೆಗೊಳಿಸಿದ ಮೆಸ್ಸಾ. ಪ್ರಜಾವಾಣಿಯ ಅಂಕಣಕಾರರಾಗಿದ್ದ ದಿನೇಶ್ ಅಮಿನ್ ಮಟ್ಟುವವರು ಫೇಸ್ ಬುಕ್ ನಲ್ಲಿ ಹೀಗೆ ಉಲ್ಲೇಕಿಸಿದ್ದರು "ಅಂಬೇಡ್ಕರ್ ಇಲ್ಲದಿದ್ದರೆ ರಕ್ತ ಕ್ರಾಂತಿಯಾಗುತ್ತಿತ್ತು, ಪ್ರಜಾಪ್ರಭುತ್ವ ಇರುತ್ತಿರಲಿಲ್ಲ. ಅಂಬೇಡ್ಕರರು ಭಾರತವನ್ನು ಇಂತದ್ದೊಂದು ವಿನಾಶದಿಂದ ತಪ್ಪಿಸಿದರು" ಎಂದು. 'ಅಂಬೇಡ್ಕರರು ಏಕಕಾಲದಲ್ಲಿ ಬ್ರಾಹ್ಮಣರನ್ನು ಹಾಗೂ ಶೂದ್ರರನ್ನು ಬಿಡುಗಡೆಗೊಳಿಸಿದರು' ಎಂಬಂತಹ ನಿರೂಪಣೆಯನ್ನು ಮಾಡಿದವರೂ ಇದ್ದಾರೆ. ಸಮಾಜ ಸಂಶೋಧಕ ವಿಧ್ಯಾರ್ಥಿಯೊಬ್ಬರು, ಒಂದು ನಾಟಕದಲ್ಲಿನ ಸನ್ನಿವೇಶವನ್ನು ನೆನೆಸಿಕೊಳ್ಳುತ್ತಾ ಅಂಬೇಡ್ಕರರನ್ನು ಸ್ಮರಿಸುತ್ತಾರೆ. ಅದರ ಪ್ರಕಾರ, ಅಂಬೇಡ್ಕರ್ ಗಾಂಧಿಜಿಯವರಲ್ಲಿ ’ಸಂವಿಧಾನವನ್ನು ರಚಿಸಲು ತನ್ನನ್ನೆ ಯಾಕೆ ಆಯ್ಕೆ ಮಾಡಿದಿರಿ, ಬೇರೆ ಯಾರೂ ಇರಲಿಲ್ಲವೇ?’ ಎಂದು ಕೇಳುತ್ತಾರೆ, ಅದಕ್ಕೆ ಪ್ರತಿಯಾಗಿ ಗಾಂಧಿಜಿಯವರು ತಲೆ ತಗ್ಗಿಸಿ ಮೌನವಾಗಿ ನಿಲ್ಲುತ್ತಾರೆ.  ಇಂತಹ ವ್ಯಕ್ತಿತ್ವ ವೈಭವೀಕರಣ ಮಾಧ್ಯಮದಲ್ಲಿ, ಸಂಶೋಧನಾಕೇದ್ರಗಳಲ್ಲಿಯೇ ರಾರಾಜಿಸುತ್ತಿದೆ. ಇಲ್ಲಿ ಪ್ರಶ್ನೆ ಏನೆಂದರೆ ಅಂಬೇಡ್ಕರರ ಸುತ್ತ ಹೆಣೆಯಲ್ಪಟ್ಟಿರುವ ಇಂತಹ ಕಥೆಗಳು ನಿಜವೇ ಎನ್ನುವದು.  ಭಾರತದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಅಂಬೇಡ್ಕರರಿಂದ ಅಸ್ತಿತ್ವಕ್ಕೆ ಬಂದಿತೆ? ನಮ್ಮ ಸಂವಿಧಾನವು ವಿಕಾಸಗೊಂಡ ಬಗೆ ಹೇಗೆ? ಇಂತಹ ಅನೇಕ ಪ್ರಶ್ನೆಗಳಿಗೆ ಉತ್ತರ ಅರುಣ್ ಶೌರಿಯವರು ಬರೆದ ’ವರ್ಷಿಪ್ಪಿಂಗ್ ಫಾಲ್ಸ್ ಗಾಡ್ಸ್’(Worshiping false Gods) ಪುಸ್ತಕದಲ್ಲಿದೆ.ಈ ಪುಸ್ತಕದಲ್ಲಿ ’The way the constitution actually evolved' ಎಂಬ ಲೆಖನದಲ್ಲಿ ನಮ್ಮ ಸಂವಿಧಾನ ಬೆಳೆದುಬಂದದ್ದನ್ನು, ಹಾಗೂ ಅದರ ವಿಕಾಸದ ಹಂತದಲ್ಲಿ ಅನೇಕ ಪ್ರತಿಭಾವಂತರ ಪಾತ್ರವನ್ನು ಅರುಣ್ ಶೌರಿಯವರು ಆಧಾರ ಸಹಿತ ವಿವರಿಸಿದ್ದಾರೆ. ಅರುಣ್ ಶೌರಿಯವರ ಪುಸ್ತಕದಲ್ಲಾಗಲೀ ಅಥವಾ ಈ ಲೇಖನದಲ್ಲಾಗಲೀ ಅಂಬೇಡ್ಕರರನ್ನು ತೆಗಳುವ ಅಥವಾ ವ್ಯಕ್ತಿತ್ವ ನಿಂದನೆಯ ಯಾವ ಉದ್ದೇಶವೂ ಇಲ್ಲ. ಬದಲಾಗಿ  ವಾಸ್ತವ ಸಂಗತಿಯನ್ನು ಅರಿಯುವ ಪ್ರಯತ್ನವನ್ನಷ್ಟೇ ಮಾಡಲಾಗಿದೆ ಅಷ್ಟೆ.
ವಾಸ್ತವದಲ್ಲಿ ಸ್ವತಃ ಅಂಬೇಡ್ಕರರೆ ಇಂತಹ ಹೇಳಿಕೆಗಳನ್ನು ಒಪ್ಪುವದಿಲ್ಲ. ಡಾ. ಕೈಲಾಸ್ ನಾಥ್ ಕಟ್ಜು ಹಾಗೂ ಕಮ್ಯುನಿಸ್ಟ್ ಮುಖ್ಯಸ್ಥರಾಗಿದ್ದ ಪಿ.ಸುಂದರಯ್ಯ ನವರೊಡನೆ ಸಮಾಲೋಚಿಸುತ್ತಿದ್ದಾಗ ಅಂಬೇಡ್ಕರರು ಹೀಗೆ ಹೇಳಿದರಂತೆ "ನನ್ನ ಸ್ನೇಹಿತರು ನಾನೆ ಸಂವಿಧಾನವನ್ನು ನಿರ್ಮಿಸಿದೆನೆಂದು ಹೇಳುತ್ತಾರೆ. ಆದರೆ, ಈ ಸಂವಿಧಾನವನ್ನು ಸುಡುವ ಮೊದಲಿಗ ಎಂದರೆ ನಾನೇ ಎಂದು ಹೇಳಬಯಸುತ್ತೇನೆ. ನನಗೆ ಈ ಸಂವಿಧಾನ ಬೇಕಾಗಿಲ್ಲ. ಈ ಸಂವಿಧಾನ ಯಾರಿಗೂ ಅನ್ವಯವಾಗುವಂತದ್ದಲ್ಲ..". ಅಂಬೇಡ್ಕರರು ತಮ್ಮ ಸುತ್ತ ಹೆಣೆಯಲ್ಪಟ್ಟಿರುವ ಕಥೆಗಳನ್ನು ತಳ್ಳಿ ಹಾಕುವದು ಹೀಗೆ. ಅಂಬೇಡ್ಕರರು ಸಂವಿಧಾನ ರಚನೆಯ ’ಡ್ರಾಫ್ಟಿಂಗ್ ಕಮೀಟಿಯ’ ಅಧ್ಯಕ್ಷರಾಗಿದ್ದರು. ಹಾಗಾಗಿ ಅವರನ್ನು ’ಸಂವಿಧಾನದ ಶಿಲ್ಪಿ’ ರಚನಾಕಾರರು ಎಂದೆಲ್ಲಾ ಪಠ್ಯ ಪುಸ್ತಕಗಳಲ್ಲಿ ಕರೆದಿದ್ದನ್ನು ನಾವು ಓದಿದ್ದೇವೆ. ಆದರೆ ’ಡ್ರಾಫ್ಟಿಂಗ್ ಕಮೀಟಿ’ ಯ ನೇಮಕಾತಿಯನ್ನು ಯಾರು ಮಾಡಿದರು? ಹಾಗೂ ’ಡ್ರಾಫ್ಟಿಂಗ್ ಕಮೀಟಿಯ’ ಹೊಣೆಗಾರಿಕೆ ಏನಿತ್ತು ಎಂಬುದನ್ನು ತಿಳಿದುಕೊಂಡರೆ ಸಂವಿಧಾನ ಬೆಳೆದುಬಂದ ಬಗೆಯನ್ನು ಅಧ್ಯಯಿಸಿದಂತೆ. ೧೯೪೬ ರಲ್ಲಿ ಅಸ್ತಿತ್ವಕ್ಕೆ ಬಂದ ’ಕಾನ್ ಸ್ಟಿಟ್ಯೂಯೆಂಟ್ ಅಸೆಂಬ್ಲಿ’ ಯು, ೧೯೪೭, ಅಗಸ್ಟ್ ೨೯ ರಲ್ಲಿ 'ಡ್ರಾಫ್ಟಿಂಗ್ ಕಮೀಟಿ'ಯನ್ನು ರಚಿಸಿತು. ಡ್ರಾಫ್ಟಿಂಗ್ ಕಮೀಟಿಯ ರಚನೆಯ ಉದ್ದೇಶ ಏನಿತ್ತೆಂದರೆ, 'ಕಾನ್ ಸ್ಟಿಟ್ಯೂಯೆಂಟ್  ಅಸೆಂಬ್ಲಿಯಿಂದ ರಚಿಸಲ್ಪಟ್ಟ ಸಂವಿಧಾನದ’ ಡ್ರಾಫ್ಟ್ ಅನ್ನು ಪರಿಶೀಲಿಸುವದು ಆಗಿತ್ತು. ಅಂದರೆ ಡ್ರಾಫ್ಟಿಂಗ್ ಕಮೀಟಿ ಅಸ್ತಿತ್ವಕ್ಕೆ ಬರುವ ಮೊದಲೇ ಸಂವಿಧಾನದ ಕರಡು ಪ್ರತಿ ’ಕಾನ್ ಸ್ಟಿಟ್ಯೂಯೆಂಟ್  ಅಸೆಂಬ್ಲಿ’ ಇಂದ ರಚನೆಯಾಗಿತ್ತು. ಅದಕ್ಕೆ ಸಂಬಂಧಿಸಿದ ನಿರ್ಣಯಗಳನ್ನು ತೆಗೆದುಕೊಳ್ಳಬಹುದಾದ ಹಕ್ಕನ್ನು ಹೊಂದಿದ್ದು, ಹಾಗೂ ನಿರ್ಣಯಗಳನ್ನು ತೆಗೆದುಕೊಂಡದ್ದು, ಕಾನ್ ಸ್ಟಿಟ್ಯೂಯೆಂಟ್ ಅಸೆಂಬ್ಲಿ ಯೆ ಹೊರತೂ ಡ್ರಾಫ್ಟಿಂಗ್ ಕಮೀಟಿಯಲ್ಲ. ಅಂಬೇಡ್ಕರರು ಚೇರ್ ಮನ್ ಆಗಿದ್ದ ಡ್ರಾಫ್ಟಿಂಗ್ ಕಮೀಟಿಯು ಮೊದಲೇ ರಚನೆಯಾಗಿದ್ದ ಸಂವಿಧಾನದ ಪರಿಶೀಲನೆಯ ಅಧಿಕಾರವನ್ನಷ್ಟೆ ಹೊಂದಿತ್ತೇ ವಿನಃ ಸಂವಿಧಾನದ ರಚನೆಯ ಜವಾಬ್ದಾರಿಯನ್ನಲ್ಲ. ೧೯೪೮ರಲ್ಲಿ ಪರಿಶೀಲಿಸಲ್ಪಟ್ಟ ಸಂವಿಧಾನವನ್ನು ಕಾನ್ ಸ್ಟಿಟ್ಯೂಯೆಂಟ್ ಅಸೆಂಬ್ಲಿ ಗೆ ಒಪ್ಪಿಸುವಾಗ ಈ ಬಗ್ಗೆ ಅಂಬೇಡ್ಕರರು ಸ್ವತಃ ನೀಡಿದ ಹೇಳಿಕೆ ಹೀಗಿದೆ(Ref: Constitution assembly debates, Volume 7, p.31):
"ಡ್ರಾಫ್ಟಿಂಗ್ ಕಮೀಟಿಯು, ಕಾನ್ ಸ್ಟಿಟ್ಯೂಯೆಂಟ್ ಅಸೆಂಬ್ಲಿಯ ನಿರ್ಣಯಗಳಿಂದ ಒಳಪಟ್ಟ ಸಂವಿಧಾನದ ಕಾರ್ಯವನ್ನು ನಿರ್ವಹಿಸುತ್ತಿದ್ದು, ಕಾನ್ ಸ್ಟಿಟ್ಯೂಯೆಂಟ್ ಅಸೆಂಬ್ಲಿಯ ನಿರ್ಣಯಗಳು ಅದರ ಬೇರೆ ಬೇರೆ ಕಾರ್ಯಾಂಗಗಳಾದ ’ಯೂನಿಯನ್ ಪವರ್ಸ್ ಕಮೀಟಿ’,’ಯೂನಿಯನ್ ಕಾನ್ ಸ್ಟಿಟ್ಯೂಶನ್ ಕಮೀಟಿ’, ’ಪ್ರಾವಿನ್ಸಿಯಲ್ ಕಾನ್ ಸ್ಟಿಟ್ಯೂಶನ್ ಕಮೀಟಿ’, ’ಅಡ್ವೈಸರಿ ಕಮೀಟಿ’  ಗಳ ರಿಪೋರ್ಟ್ ಗಳ ಆಧಾರದ ಮೇಲೆ ರಚಿತವಾಗಿದೆ. ಹಾಗೇಯೆ ಕಾನ್ ಸ್ಟಿಟ್ಯೂಯೆಂಟ್ ಅಸೆಂಬ್ಲಿಯು ಸಂವಿಧಾನ ರಚನೆಯ ಕೆಲವೊಂದು ವಿಷಯಗಳಲ್ಲಿ, ೧೯೩೪ ರ ಇಂಡಿಯಾ ಆಕ್ಟ್ ಅನ್ನು ಅನುಸರಿಸಬೇಕೆಂದು ನಿರ್ದೇಶಿಸುತ್ತದೆ. ಡ್ರಾಫ್ಟಿಂಗ್ ಕಮೀಟಿಯು ಸಲಹೆ ನೀಡಿದ ಕೆಲವೊಂದು ಅಂಶಗಳನ್ನು ಹೊರತುಪಡಿಸಿ, ಮತ್ತೆಲ್ಲ ನಿರ್ದೇಶನಗಳನ್ನು ಡ್ರಾಫ್ಟಿಂಗ್ ಕಮಿಟಿ ಪಾಲಿಸಿದೆ ಎಂದು ನಂಬಿದ್ದೇನೆ".
ಅಂಬೇಡ್ಕರರ ಈ ಮೇಲಿನ ಮಾತುಗಳು ಏನನ್ನು ಹೇಳುತ್ತವೆ? ಅಂಬೇಡ್ಕರರು ಉಲ್ಲೆಕಿಸಿದ ವಿವಿಧ ಕಮೀಟಿಗಳು ’ಕಾನ್ ಸ್ಟಿಟ್ಯೂಯೆಂಟ್ ಅಸೆಂಬ್ಲಿ’ ಯ ಕಾರ್ಯಾಂಗಗಳು. ಇವುಗಳು ಸಂಗ್ರಹಿಸಿದ ಮಾಹಿತಿ ವಿವರಗಳಿಂದ, ’ಕಾನ್ ಸ್ಟಿಟ್ಯೂಯೆಂಟ್ ಅಸೆಂಬ್ಲಿ’ಯ ನಿರ್ದೇಶನ ಹಾಗೂ ನಿರ್ಣಾಯಕತ್ವದ ಅಡಿಯಲ್ಲಿ ಸಂವಿಧಾನದ ಕರಡು ಪ್ರತಿ(ಡ್ರಾಫ್ಟ್) ರಚಿಸಲ್ಪಟ್ಟಿತು. ಈ ಡ್ರಾಫ್ಟ್ ನ ಪರಿಶೀಲನೆಯ ಹೊಣೆಗಾರಿಕೆಯನ್ನಷ್ಟೆ ಅಂಬೇಡ್ಕರರು ಚೇರ್ಮನ್ನರಾಗಿದ್ದ ಡ್ರಾಪ್ಟಿಂಗ್ ಕಮೀಟಿ ಹೊಂದಿತ್ತು. ಸಂವಿಧಾನಕ್ಕೆ ಕೆಲವೊಂದು ಸಲಹೆಯನ್ನು ಅಂಬೇಡ್ಕರರು ಹಾಗೂ ಡ್ರಾಫ್ಟಿಂಗ್ ಕಮೀಟಿ ನೀಡಿದ್ದರೂ, ಅದರ ಬಗ್ಗೆ ನಿರ್ಣಯ ತೆಗೆದುಕೊಳ್ಳುವ ಹಕ್ಕು ಇದ್ದುದು ಕಾನ್ ಸ್ಟಿಟ್ಯೂಯೆಂಟ್ ಅಸೆಂಬ್ಲಿಗೆ ಮಾತ್ರವಾಗಿತ್ತು. ಹಾಗೂ ಕಾನ್ ಸ್ಟಿಟ್ಯೂಯೆಂಟ್ ಅಸೆಂಬ್ಲಿಯಲ್ಲಿ ಅಂಬೇಡ್ಕರರ ಪಾತ್ರ ಏನೂ ಇರಲಿಲ್ಲ. ನಂತರ ೧೯೪೯ ರಲ್ಲಿ ಅಸೆಂಬ್ಲಿಯು ಪರಿಶೀಲಿಸಲ್ಪಟ್ಟ ಸಂವಿಧಾನವನ್ನು ಒಪ್ಪಿಕೊಂಡಿತು. ಆಗ, ಬೇರೆ ಬೇರೆ ಕಾರಣಗಳಿಗಾಗಿ, ಸದಸ್ಯರುಗಳಿಂದ ಸಂವಿಧಾನದ ಕುರಿತು ವಿರೋಧ ವ್ಯಕ್ತವಾಯಿತು. ಆಗ ಅಂಬೇಡ್ಕರ್ ಹೇಳಿದ್ದಿಷ್ಟು "..ಸಂವಿಧಾನದಲ್ಲಿ ಅಡಕವಾಗಿರುವ ಆದರ್ಶಗಳು ಕಾನ್ ಸ್ಟಿಟ್ಯೂಯೆಂಟ್ ಅಸೆಂಬ್ಲಿಯ ಸದಸ್ಯರುಗಳ ಅಭಿಮತಗಳಾಗಿವೆ. ಹೀಗಿದ್ದಾಗ ಡ್ರಾಫ್ಟಿಂಗ್ ಕಮೀಟಿಯನ್ನು ಯಾಕೆ ದೂರುತ್ತೀರಿ?" ಅಂದರೆ ಅಂಬೇಡ್ಕರರು ಇಲ್ಲಿ ಸ್ಪಷ್ಟವಾಗಿಯೇ ನುಡಿಯುತ್ತಾರೆ, ತಮ್ಮ ನಿರ್ಣಯದಡಿ ಸಂವಿಧಾನ ರಚಿತವಾಗಿಲ್ಲವೆಂದು.
ನಮ್ಮ ಸಂವಿಧಾನದ ಪ್ರಕ್ರಿಯೆಯ ಆರಂಭವಾದದ್ದು ಕಾನ್ ಸ್ಟಿಟ್ಯೂಯೆಂಟ್ ಅಸೆಂಬ್ಲಿಯ ರಚನೆಯ ಮೂಲಕವಾದರೂ, ಸಂವಿಧಾನವನ್ನು ರಚಿಸುವ ಪ್ರಯತ್ನ ಶುರುವಾದದ್ದು ಡಿಸೆಂಬರ್ ೧೯೨೪ ರಲ್ಲಿ ’ದಿ ಕಾಮನ್ ವೆಲ್ತ್ ಆಫ್ ಇಂಡಿಯಾ ಬಿಲ್’ ಡ್ರಾಫ್ಟ್ ಆದಾಗ. ನಂತರ ೧೯೨೭ ರಲ್ಲಿ ಭಾರತೀಯ ಕಾಂಗ್ರೆಸ್ ಕಮೀಟಿಯಲ್ಲಿದ್ದ ಶ್ರೀನಿವಾಸ್ ಅಯ್ಯಂಗಾರ್ ಅವರು ಫೆಡರಲ್ ಮಾದರಿಯ ’ಸ್ವರಾಜ್’ ಸಂವಿಧಾನವನ್ನು ಸಿದ್ಧಪಡಿಸಿದರು. ಅಂದರೆ ಪ್ರಜಾಪ್ರಭುತ್ವದ ಐಡಿಯಾ ಭಾರತೀಯ ರಾಜಕೀಯ ಮುಖಂಡರುಗಳಲ್ಲಿ ಬೇರೂರುವಾಗ ಅಂಬೇಡ್ಕರರಿಗಿನ್ನೂ ತಮ್ಮ ಅಧ್ಯಯನವನ್ನು ಮುಗಿಸಿರಲಿಲ್ಲ ಎನ್ನಬಹುದು. ವಿಷಯ  ಹೀಗಿದ್ದಾಗ 'ಅಂಬೇಡ್ಕರರು ಇಲ್ಲದಿದ್ದರೆ  ಪ್ರಜಾಪ್ರಭುತ್ವ ಇರುತ್ತಿರಲಿಲ್ಲ' ಎನ್ನುವ ಮಟ್ಟುವವರ ಹೇಳಿಕೆ  ಕೇವಲ ಅಸಂಬದ್ಧ ಮಾತ್ರವಲ್ಲ, ಸರಕಾರದ ಜವಾಬ್ದಾರಿ ಸ್ಥಾನದಲ್ಲಿದ್ದು ಜನರ ಹಾದಿ ತಪ್ಪಿಸುವ ಬೇಜವಾಬ್ದಾರಿತನವೂ ಹೌದು. ಹೀಗೆ ಶುರುವಾದ  ಸಂವಿಧಾನ ರಚನೆಯ ಪ್ರಯತ್ನ ಅನೇಕ ರಾಜಕೀಯ ಕಾರಣಗಳಿಂದಾಗಿ ವಿಫಲವಾಗಿದ್ದವು. ನಂತರ ಮತ್ತೆ ಭಾರತದ ಸಂವಿಧಾನ ರಚನೆಯ ಕಾರ್ಯ ಶುರುವಾದದ್ದು ೧೯೪೬ ರಲ್ಲಿ ಕಾನ್ ಸ್ಟಿಟ್ಯೂಯೆಂಟ್ ಅಸೆಂಬ್ಲಿಯ ಸ್ಥಾಪನೆಯ ಮೂಲಕ. ಭಾರತದ ಸಂವಿಧಾನ ರಚನೆಯಲ್ಲಿ, ಕಾನ್ ಸ್ಟಿಟ್ಯೂಯೆಂಟ್ ಅಸೆಂಬ್ಲಿಯ ಪಾತ್ರವೇ ಬಹಳ ಮುಖ್ಯವಾದುದು. ಇದಕ್ಕಾಗಿ ಕೆ. ಎಂ ಮುನ್ಷಿ, ಬಿ.ಎನ್ ರಾವ್, ಕೆ.ಟಿ ಶಾಹ್, ಆಚಾರ್ಯ ಕೃಪಾಲಾನಿ, ಎಚ್.ವಿ,ಆರ್ ಅಯ್ಯಂಗಾರ್, ಎಸ್.ಎನ್ ಮುಖರ್ಜೀ ಮುಂತಾದವರು ಮುಖ್ಯ ಕಾರ್ಯ ನಿರ್ವಹಿಸಿದ್ದಾರೆ. ಹಾಗೆಯೆ ರಾಜಕೀಯ ಮುಖಂಡರುಗಳಾದ ಸರ್ದಾರ್ ವಲ್ಲಭಾಯೀ ಪಟೆಲ್, ಗಾಂಧಿಜಿ, ನೆಹರು ಮುಂತಾದವರು ಕಾನ್ ಸ್ಟಿಟ್ಯೂಯೆಂಟ್ ಅಸೆಂಬ್ಲಿಯ ಸ್ಥಾಪನೆ ಹಾಗೂ ಕಾರ್ಯ ನಿರ್ಬಹಣೆಯಲ್ಲಿ ಮುಖಂಡತ್ವವನ್ನು ವಹಿಸಿದ್ದರು. ಈ ಸಮಯದಲ್ಲಿ ಗಾಂಧಿಜಿಯವರು ಕೆ. ಎಂ ಮುನ್ಷಿಯವರಲ್ಲಿ ಬಂದು ಸಂವಿಧಾನ ರಚನೆಯಲ್ಲಿ ಕಾರ್ಯ ನಿರ್ವಹಿಸುವಂತೆ ಕೇಳಿಕೊಳ್ಳುತ್ತಾರೆ. ಅವರಿಂದ ನಂತರ ೧೯೪೬ರಲ್ಲಿ ಒಂದು ಕಚ್ಚಾ ಪ್ರತಿ ತಯಾರಾಗಲ್ಪಡುತ್ತದೆ. ಈ ಪ್ರತಿಯನ್ನೆ ಮೂಲವಾಗಿರಿಸಿಕೊಂಡು ನಂತರದ ಸಂವಿಧಾನವನ್ನು ಕಾನ್ ಸ್ಟಿಟ್ಯೂಯೆಂಟ್ ಅಸೆಂಬ್ಲಿ ಹಾಗೂ ಅದರ ಕಾರ್ಯಾಂಗಗಳು(ಉದಾ: ’ಯೂನಿಯನ್ ಪವರ್ಸ್ ಕಮೀಟಿ’,’ಯೂನಿಯನ್ ಕಾನ್ ಸ್ಟಿಟ್ಯೂಶನ್ ಕಮೀಟಿ’, ’ಪ್ರಾವಿನ್ಸಿಯಲ್ ಕಾನ್ ಸ್ಟಿಟ್ಯೂಶನ್ ಕಮೀಟಿ’, ’ಅಡ್ವೈಸರಿ ಕಮೀಟಿ’ ) ರಚಿಸುತ್ತವೆ. ಇದನ್ನು ಕೆ.ಎಂ ಮುನ್ಷಿಯವರು ತಮ್ಮ ಕೃತಿಯಾದ ’Pilgrimage to Freedom' ನಲ್ಲಿ ಬರೆದಿದ್ದಾರೆ.  ಈ ಕಾನ್ ಸ್ಟಿಟ್ಯೂಯೆಂಟ್ ಅಸೆಂಬ್ಲಿ ಗೆ ಅಡ್ವೈಸರ್ ಆಗಿ ಬಿ.ಎನ್ ರಾವ್ ಅವರೂ, ಸೆಕ್ರೆಟರಿಯಾಗಿ ಎಚ್.ವಿ.ಆರ್ ಅಯ್ಯಂಗಾರ್ ಅವರೂ ಹಾಗೂ ಎಸ್ ಎನ್ ಮುಖರ್ಜಿಯವರು ಕರಡು ಪ್ರತಿಯ ಮುಖ್ಯಸ್ಥರಾಗಿಯೂ ನೇಮಕವಾಗಿದ್ದರು.  ಸಂವಿಧಾನದ ರೂಪುರೇಷೆಯನ್ನು ಅಮೇರಿಕಾ, ಸ್ವಿಡ್ಜರ್ ಲ್ಯಾಂಡ್, ಜರ್ಮನಿ ಮುಂತಾದ ಹಲವು ದೇಶಗಳ ಸಂವಿಧಾನವನ್ನು ಆಯ್ದುಕೊಳ್ಳಲಾಗಿತ್ತು. ಹೀಗೆಯೆ ನಡೆದ ಸಂವಿಧಾನದ ರಚನೆ, ೧೯೪೭ ಸಪ್ಟಂಬರ್ ಹೊತ್ತಿಗೆ ಸ್ಪಷ್ಟ ರೂಪವನ್ನು ಪಡೆಯಿತು. ಇದನ್ನೆ ’ಭಾರತದ ಸಂವಿಧಾನದ ಮೊದಲ ಪ್ರತಿ’(The first Draft of constitution of India) ಎಂದು ಕರೆಯಲಾಯಿತು. ಇದೆಲ್ಲದರ ನಂತರ ಈ ಸಂವಿಧಾನದ ಪ್ರತಿಯ ಪರಿಶೀಲನೆಗೆ ಕಾನ್ ಸ್ಟಿಟ್ಯೂಯೆಂಟ್ ಅಸೆಂಬ್ಲಿ ಯಿಂದ ನೇಮಕಗೊಂಡ ಕಾರ್ಯ ಸಮೀತಿಯೇ ಅಂಬೇಡ್ಕರರು ಚೇರ್ಮನ್ನರಾಗಿದ್ದ "ಡ್ರಾಫ್ಟಿಂಗ್ ಕಮೀಟಿ". ಮೊದಲೇ ಹೇಳಿದಂತೆ ಈ "ಡ್ರಾಫ್ಟಿಂಗ್ ಕಮೀಟಿ" ಯ ಜವಾಬ್ದಾರಿ, ಕೇವಲ ಪರಿಶೀಲನೆಯಾಗಿತ್ತೆ ವಿನಃ ಸಂವಿಧಾನದ ರಚನೆಯಲ್ಲ. ಮುಂದೆ ಅಂಬೇಡ್ಕರರು ಮೀಸಲಾತಿಯ ಕುರಿತು ಹಲವು ಬದಲಾವಣೆಗಳನ್ನು ಸಲಹೆ ಮಾಡಿದರು. ಹಾಗೂ ಈ ಬದಲಾವಣೆಗಳನ್ನು ಕಾನ್ ಸ್ಟಿಟ್ಯೂಯೆಂಟ್ ಅಸೆಂಬ್ಲಿ ನಂತರ ಸಂವಿಧಾನದಲ್ಲಿ ಅಳವಡಿಸಿಕೊಂಡಿತು. ಇದು ನಮ್ಮ ಸಂವಿಧಾನ ವಿಕಾಸದ ಹಾದಿಯ ಕುರಿತು ಸಂಕ್ಷಿಪ್ತ ಮಾಹಿತಿ. 
ಕಾನ್ ಸ್ಟಿಟ್ಯೂಯೆಂಟ್ ಅಸೆಂಬ್ಲಿಯು ನಮ್ಮ ಸಂವಿಧಾನ ರಚನೆಗೆ ನಾಂದಿ ಹಾಡಿದ್ದು, ಹಾಗೂ  ಬುನಾದಿ ಹಾಕಿ ಕೊಟ್ಟಿದ್ದೇನೋ ನಿಜ. ಆದರೆ ಕಾನ್ ಸ್ಟಿಟ್ಯೂಯೆಂಟ್ ಅಸೆಂಬ್ಲಿಯ ರಚನೆಯ ಕುರಿತು ಅಂಬೇಡ್ಕರರ ಅಭಿಪ್ರಾಯವೇನಾಗಿತ್ತು?
ಅಂಬೇಡ್ಕರರ ಮಾತಿನಲ್ಲಿಯೇ ಉದಾಹರಿಸಬೇಕೆಂದರೆ, ಅಂಬೇಡ್ಕರರಿಗೆ ಭಾರತ ಸ್ವತಂತ್ರ ಸಂವಿಧಾನ ಅಳವಡಿಸಿಕೊಳ್ಳುವದೇ ಬೇಕಾಗಿರಲಿಲ್ಲ. ಅವರು ಈ ಬಗ್ಗೆ ಹೀಗೆ ಹೇಳುತ್ತಾರೆ:(Ref: Dr. Babasaheb Ambedkar, Writings and speeches Volume 1, page 361)
"ನನ್ನ ನಿಲುವು ಕಾನ್ ಸ್ಟಿಟ್ಯೂಯೆಂಟ್ ಅಸೆಂಬ್ಲಿ ಯ ರಚನೆಗೆ ಸಂಪೂರ್ಣ ವಿರುದ್ಧವಾಗಿದೆ, ಇದು ತೀರಾ ಅತಿರೇಕವಾದುದು. ನಾನು ಇದನ್ನು ಅತ್ಯಂತ ಅಪಾಯಕಾರಿ ಎಂದು ಭಾವಿಸುತ್ತೇನೆ, ಹಾಗೂ ಇದು ಈ ದೇಶವನ್ನು ಸಿವಿಲ್ ವಾರ್ ಎಡೆಗೆ ತಳ್ಳಬಹುದು. ಮೊದಲನೆಯದಾಗಿ ನಮ್ಮ ದೇಶಕ್ಕೆ ಕಾನ್ ಸ್ಟಿಟ್ಯೂಯೆಂಟ್ ಅಸೆಂಬ್ಲಿ ಯ ಅಗತ್ಯತೆ ಏನಿದೆ ಅಂತಲೇ ನನಗೆ ಅರ್ಥವಾಗುತ್ತಿಲ್ಲ...."
ಕಾನ್ ಸ್ಟಿಟ್ಯೂಯೆಂಟ್ ಅಸೆಂಬ್ಲಿಯನ್ನು ಹೀಗೆ ವಿರೋಧಿಸಿದ ಅವರು ಅದಿರಿಂದಲೇ ನೇಮಕಗೊಂಡ 'ಡ್ರಾಫ್ಟಿಂಗ್ ಕಮೀಟಿ’ ಗೆ ನೇಮಕಗೊಂಡಿದ್ದು ವಿಪರ್ಯಾಸವೇ ಸರಿ. ಕೇವಲ ಕಾನ್ ಸ್ಟಿಟ್ಯೂಯೆಂಟ್ ಅಸೆಂಬ್ಲಿ ಯ ರಚನೆಯ ಬಗ್ಗೆ ಮಾತ್ರವಲ್ಲ.    ಭಾರತದ ಸ್ವಾತಂತ್ರ್ಯ ಗಳಿಕೆಯ ಬಗ್ಗೆಯೂ ಅಂಬೇಡ್ಕರರಿಗೆ ಒಲವಿರಲಿಲ್ಲ. ವೈಸರಾಯ್ ಆಗಿದ್ದ ಲಾರ್ಡ್ ವಾವೆಲ್ (Lord Wavell) ಜೊತೆ ನಡೆದ ಮಾತುಕತೆಯಲ್ಲಿ ಹೀಗೆ ಹೇಳಿದ್ದನ್ನು ಲಾರ್ಡ್ ವಾವೆಲ್ ನಂತರ ಬಹಿರಂಗ ಪಡಿಸಿದ್ದರು. "ದಲಿತರು ಬ್ರಿಟಿಶರ ಈಸ್ಟ್ ಇಂಡಿಯಾ ಕಂಪನಿಯ ಸೈನ್ಯದ ಮಾನವಶಕ್ತಿಯ ಮೂಲ. ಯಾಕೆಂದರೆ ದಲಿತರ ಸಹಕಾರದಿಂದಲೇ ಬ್ರಿಟಿಶರು ಭಾರತದಲ್ಲಿ ಅಧಿಕಾರವನ್ನು ಸ್ಥಾಪಿಸಲು ಸಾಧ್ಯವಾಯಿತು. ಹಾಗೂ ದಲಿತರು ಮೊದಲಿನಿಂದರೂ ಬ್ರಿಟಿಶರ ಸ್ನೇಹಿತರು. ಒಂದು ವೇಳೆ ಭಾರತವೇನಾದರೂ ಸ್ವತಂತ್ರವಾದರೆ, ಅದು ತೀರಾ ಕೆಟ್ಟ ಪರಿಣಾಮಕ್ಕೆ ಅನುವುಮಾಡಿಕೊಡುತ್ತದೆ" ಎಂದು ಹೇಳಿದ್ದರಂತೆ. ಅರುಣ್ ಶೌರಿಯವರು ತಮ್ಮ ಪುಸ್ತಕದಲ್ಲಿ ಈ ಕಾರಣಕ್ಕಾಗಿಯೇ ಅಂಬೇಡ್ಕರರು ಸ್ವಾತಂತ್ರ್ಯ ಹೊರಾಟಗಾರರಲ್ಲವೆಂದು ಟೀಕಿಸಿದ್ದಾರೆ. ಕೊನೆಯಲ್ಲಿ ಅರುಣ್ ಶೌರಿಯವರು ಹೀಗೆ ಅಭಿಪ್ರಾಯ ಪಡುತ್ತಾರೆ ’ಅಂಬೇಡ್ಕರರು ಸಂವಿಧಾನ ರಚನೆಯಲ್ಲಿ ಪಾಲ್ಗೊಂಡ ಬಹಳ ಜನರಲ್ಲಿ ಒಬ್ಬರು. ಕೆಲವೊಂದು ರೀತಿಯಲ್ಲಿ ಮುಖ್ಯ ಪಾತ್ರವನ್ನೆ ವಹಿಸಿದ್ದರು. ಆದರೆ ಅವರ ಕೆಲಸ ಮಾಹಿತಿ ಸಂವಹನವಷ್ಟೇ  (rapporteur) ಆಗಿತ್ತು. ಆದರೆ ಸಂವಿಧಾನದ ಪಾಲಸಿಯ ರಚನೆಯಲ್ಲಾಗಲೀ ಅಥವಾ ಸಂವಿಧಾನವನ್ನು ರಚಿಸುವಲ್ಲಾಗಲೀ ಅವರ ಪಾತ್ರವೇನೂ ಇಲ್ಲ. ಸಂವಿಧಾನವನ್ನು ಅವರೊಂದಿಗೆ ತಳುಕುಹಾಕುವದು ಕೇವಲ ನಾಟಕೀಯವಾಗಿದೆ’.

ಸಂವಿಧಾನ ರಚನೆಯಲ್ಲಿ ಅಂಬೇಡ್ಕರರ ಪಾತ್ರವೆಷ್ಟು ಎನ್ನುವದು ಚರ್ಚೆಯ ವಿಷಯವಲ್ಲದಿರಬಹುದು.  ಆದರೆ ಅವರ ಸುತ್ತ ಹರಡಿಕೊಂಡಿರುವ ಮಿಥ್ಯೆಗಳು, ಕಟ್ಟುಕಥೆಗಳು, ಅತಿ ಎನಿಸುವ ವ್ಯಕ್ತಿತ್ವ ವೈಭವ ಹಾಗೂ ಅವರು ನುಡಿಯದೆ ಇರುವದನ್ನುರಾಜಕೀಯ ಕಾರಣಗಳಿಗಾಗಿ 'ಅಂಬೇಡ್ಕರ್ ವಾದ' ಎನ್ನುವ ಸಿದ್ಧಾಂತದ ಹೆಸರಿನಲ್ಲಿ ಬಳಸಿಕೊಳ್ಳುತ್ತಿರುವದು ಆತಂಕಕಾರಿಯಾಗಿರುವ ವಿಷಯ. ಯಾಕೆಂದರೆ ಈ ಸಿದ್ಧಾಂತಿಗಳು ಅಂಬೇಡ್ಕರರ ಚಿಂತನೆಗಳನ್ನು ಒರೆ ಹಚ್ಚದಿರುವದು ಮಾತ್ರವಲ್ಲ, ಅಂಬೇಡ್ಕರರು ನುಡಿಯದಿರುವದನ್ನೂ ತಮ್ಮ ಸಿದ್ಧಾಂತದಲ್ಲಿ ಸೇರಿಸಿಕೊಂಡಿರುತ್ತಾರೆ. ಉದಾರಣೆಗೆ ಅಂಬೇಡ್ಕರರು ಒಪ್ಪದ ಹಾಗೂ ವೈಜ್ಞಾನಿಕವೂ ಅಲ್ಲದ, ಪೆರಿಯಾರರು ಅನುಮೋದಿಸಿದ ಆರ್ಯನ್ನರ ಆಕ್ರಮಣದ ಕಥೆಗಳು ಇವರುಗಳು ನಂಬುವ ಇತಿಹಾಸವಾಗಿಬಿಡುತ್ತವೆ. ಅಂಬೇಡ್ಕರರು ಒಪ್ಪದ ಮಾರ್ಕ್ಸ್ ವಾದವನ್ನು ತಮ್ಮ ಸಿದ್ಧಾಂತದ ಭಾಗ ಎಂದು ಪರಿಗಣಿಸಿಬಿಡುತ್ತಾರೆ.  ತತ್ವ , ಸಿದ್ಧಾಂತಗಳಲ್ಲಿ ಭಿನ್ನ ಇರುವ ಮಾರ್ಕ್ಸ್, ಅಂಬೇಡ್ಕರ್ , ಪೆರಿಯಾರ್  ಒಂದೇ ವೇದಿಕೆಯಲ್ಲಿ ಇವರ ಸಿದ್ಧಾಂತದ ಬ್ರಾಂಡ್ ಅಂಬಾಸಿಡರ್ ಆಗಿಬಿಡುತ್ತಾರೆ. ಆತಂಕಕಾರಿಯಾದ ವಿಷಯಗಳೇನೆಂದರೆ, ಪೋಸ್ಟ್ ಮಾಡರ್ನ್ ಕಾಲ ಎಂದು ಕರೆಯಲ್ಪಡುವ ಇಂದು ಇಂತಹ ಅದೆಷ್ಟೋ ಸಿದ್ಧಾಂತಗಳ(ಐಡಿಯಾಲಜಿ) ಆಷಾಢಭೂತಿತನ ವೈಜ್ನಾನಿಕವಾಗಿ ಸಾಭೀತಾದರೂ ಇಂದಿಗೂ ಅವನ್ನು ವಿಶ್ವವಿಧ್ಯಾನಿಲಯಗಳಲ್ಲಿ ಬೋಧಿಸಲಾಗುತ್ತಿದೆ, ಹಾಗೂ ಇಂತಹ ಯುವಕರನ್ನು ರಾಜಕೀಯವಾಗಿ ಸಮರ್ಥವಾಗಿ ಬಳಸಿಕೊಳ್ಳಲಾಗುತ್ತಿದೆ.  ದುರಂತವೆಂದರೆ ಇಂತಹ ಹಲವಾರು ಅವೈಜ್ನಾನಿಕ ತಿಳುವಳಿಕೆಗಳನ್ನು, ಅಧ್ಯಯನದ ಮಾದರಿಗಳನ್ನು ವಿಶ್ವವಿಧ್ಯಾನಿಲಯಗಳೇ ವಿಧ್ಯಾರ್ಥಿಗಳಲ್ಲಿ ತುಂಬುತ್ತಿವೆ. ಸಂಶೋಧನಾ ವಿಧ್ಯಾರ್ಥಿಯಾಗಿದ್ದ ರೋಹಿತ್ ವೇಮುಲ ನ ಆತ್ಮಹತ್ಯೆಯ ನಂತರದ ಬೆಳವಣಿಗೆಗಳು ನಮ್ಮನ್ನು ಈ ದಿಸೆಯಲ್ಲಿ ಆಲೋಚಿಸುವಂತೆ ಮಾಡಿದೆ. ಇಂತಹ ಮಿಥ್ಯಾ ಸಿದ್ಧಾಂತದ ಅಮಲಿನಲ್ಲಿ ತಮ್ಮ ಭವಿಷ್ಯವನ್ನೇ ಹಾಳುಮಾಡಿಕೊಳ್ಳುವ ಬಿಸಿ ರಕ್ತದ ಹುಂಬರು ಒಂದೆಡೆಯಾದರೆ, ಏಸಿ ರೂಮಿನಲ್ಲಿಕುಳಿತು ರಾಜಕೀಯ ಲಾಭಕ್ಕಾಗಿ ಇಂತವರನ್ನು ಬಳಸಿಕೊಳ್ಳುವ ಪತ್ರಕರ್ತರು, ರಾಜಕೀಯ ಪುಢಾರಿಗಳು, ಹೋರಾಟಗಾರರೆನಿಸಿಕೊಂಡ ಅವಕಾಶವಾದಿಗಳು ಇನ್ನೊಂದೆಡೆ.
ವಿಜ್ಞಾನ ಎನ್ನುವದು ಸತ್ಯದ ಹುಡುಕಾಟದ ನಿರಂತರ ಪ್ರಕ್ರಿಯೆ. ಆದರೆ ಸಿದ್ಧಾಂತ (ಐಡಿಯಾಲಜಿ) ಎಂದರೆ ನಿಂತ ನೀರು. ಸಿದ್ಧಾಂತಕ್ಕೆ ಜೋತು ಬಿದ್ದವರು ಸಮಾಜ ತಮ್ಮ ಸಿದ್ಧಾಂತಕ್ಕೆ ಅನುಗುಣವಾಗಿ ಇರಬೇಕು ಎನ್ನುತ್ತಾರೆಯೇ ಹೊರತು ಸಿದ್ಧಾಂತಗಳು ಬದಲಾಗುವ ಸಮಾಜಕ್ಕನುಗುಣವಾಗಿ ರೂಪುಗೊಳ್ಳಬೇಕು ಎನ್ನುವ ತತ್ವವನ್ನು ಹೊಂದಿರುವದಿಲ್ಲ. ಶಿಕ್ಷಣ ಎನ್ನುವದು ವಿಜ್ಞಾನಕ್ಕನುಗುಣವಾಗಿ ನಿರಂತರ ಬದಲಾವಣೆಯ ಪ್ರಕ್ರಿಯೆಯಲ್ಲಿರಬೇಕೆ ವಿನಃ ಸಿದ್ಧಾಂತಗಳೇ ಅಂತಿಮ ಎಂದು ಬೋಧಿಸಬಾರದು. ಹಾಗಿದ್ದರೆ ಮಾತ್ರ ರೋಹಿತನಂತಹ ಪ್ರತಿಭಾವಂತಹ ಹುಡುಗರ ಆತ್ಮಹತ್ಯೆಯೂ ನಿಂತೀತು ಹಾಗೂ ಆತನ ಕನಸುಗಳೂ ಸಾಕಾರಗೊಳ್ಳಬಹುದು  

Comments

Popular Posts