ರಮ್ಜಾನ್ ಹಾಗೂ ಸೆಮಿಟಿಕ್ ಧಾರ್ಮಿಕ ಹಬ್ಬಗಳಲ್ಲಿ ಮೂರ್ತಿಪೂಜೆಯ ಹಿನ್ನೆಲೆ

ಸೆಮಿಟಿಕ್ ಧರ್ಮಗಳಾದ ಕ್ರಿಶ್ಚಿಯನ್, ಇಸ್ಲಾಮ್, ಯಹೂದಿಗಳ ಯಾವುದೆ ಹಬ್ಬಗಳ ಆಚರಣೆಗಳನ್ನು ಭಾರತೀಯ ಹಬ್ಬಗಳ ಜೊತೆ ತಳುಕು ಹಾಕಿದಾಗ ಕೆಲವು ಸಾಮ್ಯತೆಗಳೆನೋ ಸಿಗಬಹುದು. ಆದರೆ ಸಂಪೂರ್ಣ ಭಿನ್ನವಾಗಿರುವ ಅಂಶವೆಂದರೆ ಭಾರತೀಯ ಹಬ್ಬಗಳಲ್ಲಿನ ಮೂರ್ತಿಪೂಜೆಯ ಆಚರಣೆ.  ಚಿಕ್ಕವನಿದ್ದಾಗ ನಾನು ಪ್ರತಿ ವರ್ಷ ರಮ್ಜಾನ್ ಸಮಯದಲ್ಲಿ ಕೈಗೊಳ್ಳುವ ಉಪವಾಸವನ್ನು ಶಿವರಾತ್ರಿಯ ಉಪವಾಸದ ಜೊತೆ ತಳುಕು ಹಾಕುತ್ತಿದ್ದೆ. ಆಗೆಲ್ಲಾ  ರಮ್ಜಾನ್ ನ ಉಪವಾಸದ ಆಚರಣೆಗೂ, ಚಂದ್ರನ ಪ್ರಸ್ತುತೆಗೂ ಕಾರಣ ಗೊತ್ತಿರಲಿಲ್ಲ. ಈ ದಿನಗಳಲ್ಲಿ ರಮ್ಜಾನ್ ಆಚರಿಸುವವರು ಹಗಲು ಹೊತ್ತಿನಲ್ಲಿ ಉಪವಾಸವಿದ್ದು ರಾತ್ರಿ, ಚಂದ್ರ ಕಾಣಿಸಿದ ನಂತರ ಊಟವನ್ನು ಮಾಡುತ್ತಾರೆ. 'ಚಂದ್ರನು ಕಾಣಿಸುವದಕ್ಕೂ ಉಪವಾಸ ಮುಗಿಸಿ ಊಟ ಮಾಡುವದಕ್ಕೂ ಏನು ಸಂಬಂಧ?' 'ಏಕದೇವೋಪಾಸಕರಲ್ಲಿ ಚಂದ್ರನಿಗೆ ಮಹತ್ವ ಯಾಕಿದೆ?' ಇದು ನಾನು ಮೊದಲಿನಿಂದಲೂ  ಕೇಳಿಕೊಳ್ಳುತ್ತಿದ್ದ ಪ್ರಶ್ನೆ. ರಮಾದಾನ್ ಎನ್ನುವದು ಮೂಲತಃ ಇಸ್ಲಾಮಿಕ್ ಕ್ಯಾಲಂಡರಿನ ಒಂಬತ್ತನೇ ತಿಂಗಳಿನ ಹೆಸರು. ಇದು ಚಂದ್ರನ ಚಲನೆಯ ಆಧಾರದ ಮೇಲೆ ರಚಿತವಾದದ್ದು. ವಾಸ್ತವದಲ್ಲಿ ರಮಾದಾನ್ ಸೇರಿದಂತೆ ಅನೇಕ ತಿಂಗಳುಗಳ ಹೆಸರುಗಳು ಇಸ್ಲಾಮಿಕ್ ಪೂರ್ವದಲ್ಲಿ ಅರಬ್ಬರು ಬಳಸುತ್ತಿದ್ದರು ಎಂದು ಸಮಕಾಲೀನ ಚಿಂತಕರಾದ ಅಲ್ಬಿರುನಿ ಹಾಗೂ ಅಲ್ಮಸುದಿ ಅಭಿಪ್ರಾಯ ಪಡುತ್ತಾರೆ. ರಮಾದಾನ್ ತಿಂಗಳು ಇಸ್ಲಾಮಿಕ್ ಪೂರ್ವದಲ್ಲಿಯೂ  ಆಗ ಅಸ್ತಿತ್ವದಲ್ಲಿದ್ದ ಪೇಗನ್ನರಿಂದ ಹಬ್ಬವಾಗಿ ಆಚರಿಸಲ್ಪಡುತ್ತಿತ್ತು. ಇದನ್ನು ಮುಸ್ಲಿಮರ ಗ್ರಂಥವಾದ ಹದಿತ್ ಕೂಡ ನಿರಾಕರಿಸುವದಿಲ್ಲ. ಬುಖಾರಿ   5:58:172 ಯಲ್ಲಿ ಐಶಾ ಹೀಗೆ ವಿವರಿಸುತ್ತಾರೆ " ಅಶುರಾ ಎನ್ನುವ ದಿನ ಇಸ್ಲಾಮಿಕ್ ಪೂರ್ವದ ಅಜ್ಞಾನ ಕಾಲದಲ್ಲಿ ಖುರಾಯಿಶ್ ಎನ್ನುವ ಅರಬ್ ಜನಾಂಗ ಉಪವಾಸವನ್ನು ಆಚರಿಸುತ್ತಿದ್ದರು. ಪ್ರವಾದಿಯವರೂ ಅದೇ ದಿನ ಉಪವಾಸವನ್ನು ಆಚರಿಸುತ್ತಿದ್ದರು. ಯಾವಾಗ ಅವರು ಮದೀನಾಕ್ಕೆ ಬಂದರೊ ಆಗ ಉಳಿದ ಮುಸ್ಲೀಮರಿಗೂ ಆಚರಿಸುವಂತೆ ಆಜ್ಞಾಪಿಸಿದರು. ಹೀಗೆಯೆ ರಮ್ಜಾನ್ ಮುಸ್ಲಿಮರಲ್ಲಿ ಹಬ್ಬವಾಗಿ ಬೆಳೆದುಬಂದಿತು" ಎನ್ನುತ್ತದೆ. 'ಖುರಾಯಿಶ್' ಎನ್ನುವದು ಇಸ್ಲಾಮಿಗೂ ಪೂರ್ವದಲ್ಲಿ ಅರೇಬಿಯಾದಲ್ಲಿ ನೆಲೆಸಿದ್ದ ಪೇಗನ್ ಜನಾಂಗ.  ಸೂರ್ಯ, ಚಂದ್ರ, ಪ್ರಕೃತಿಯ ಪೂಜೆ ಪೇಗನ್ನರ ನಂಬಿಕೆಗಳಲ್ಲಿ ಸರ್ವೆ ಸಾಮಾನ್ಯ. ’ಹೂಬಲ್’(Hubal)  ಎಂಬುದು ಚಂದ್ರ ದೇವನ ಹೆಸರು. ಮಾರ್ಚ್ ೩ ರ ನಂತರ ಚಂದ್ರನು Taurus (ವೃಷಭ) ನಕ್ಷತ್ರ ರಾಶಿಯೊಳಗೆ ಸೇರಿ ಹೋಗುತ್ತಾನೆ. ಹಾಗಾಗಿ ಜನರು ಚಂದ್ರನನ್ನು ಮತ್ತೆ ಬರುವಂತೆ ಬೇಡಿಕೊಳ್ಳುತ್ತಾರೆ. ರಮ್ಜಾನ್ ನಲ್ಲಿ ನಡೆಸುವ ಉಪವಾಸವು ಚಂದ್ರನಿಗೆ ಅರ್ಪಿಸುವ ತ್ಯಾಗದ ಸಂಕೇತ. ಹಾಗಾಗಿ ಅಂದಿನ ಚಂದ್ರನ ಮೂರ್ತಿಪೂಜೆ ಪಾರಂಪರಿಕವಾಗಿ ಇಸ್ಲಾಂ ಧರ್ಮದಲ್ಲಿ ಬೆಳೆದುಬಂದಿದೆ ಎನ್ನಬಹುದು.
ಕೇವಲ ರಮ್ಜಾನ್ ಮಾತ್ರವಲ್ಲ, ಇಸ್ಲಾಮಿನ ಬಹುತೇಕ ಆಚರಣೆಗಳು ಪೆಗನ್ನರಿಂದ ಬಂದಿದ್ದು ಎನ್ನುವದು ನಿರ್ವಿವಾದ. ಅಷ್ಟೆ ಅಲ್ಲ, ಕೇವಲ ಇಸ್ಲಾಂ ಮಾತ್ರವಲ್ಲದೇ ಪಾಶ್ಚಾತ್ಯ ರಿಲಿಜಿಯನ್ನುಗಳಾದ ಕ್ರಿಶ್ಚಿಯಾನಿಟಿ, ಯಹೂದಿ ರಿಲಿಜಿಯನ್ನುಗಳ ಆಚರಣೆಗಳು ಪೆಗನ್ನರಿಂದಲೇ ಹುಟ್ಟಿಕೊಂಡಿವೆ ಎಂದರೆ ತಪ್ಪಾಗಲಾರದು. ಹಾಗಾಗಿಯೆ ಎಲ್ಲಾ ಸೆಮಿಟಿಕ್ ರಿಲಿಜಿಯನ್ನುಗಳಲ್ಲಿ ನಾವು ಸಾಮ್ಯತೆಯನ್ನು ಕಾಣಬಹುದು. ಮೆಕ್ಕಾದ ಕಡೆ ತಿರುಗಿ ದಿನಕ್ಕೆ ಐದು ಬಾರಿ ನಮಿಸುವ ಪದ್ದತಿ ಇಸ್ಲಾಮಿಕ್ ಪೂರ್ವದ ಪೇಗನ್ನರಲ್ಲಿಯೂ ಇತ್ತು. ಪಾರ್ಸಿಗಳಲ್ಲಿಯೂ ಇದೆ. ಸೂರ್ಯನನ್ನು ಇವರು ಪೂಜಿಸುತ್ತಿದ್ದರಿಂದ ಇದು ಸೂರ್ಯನಿಗೆ ನಮಿಸುವ ಪದ್ದತಿಯಾಗಿತ್ತು. ಇಹ್ರಮ್ ಸಂದರ್ಭದಲ್ಲಿ ಮೈಶುದ್ಧಿಮಾಡಿಕೊಳ್ಳುವಿಕೆ, ಹಾಗೂ ಇಹ್ರಮ್ ಬಟ್ಟೆಯನ್ನು ತೊಡುವದು ಪೇಗನ್ನರು ವಿಗ್ರಹಾರಾಧನೆಯ ಸಂದರ್ಭದಲ್ಲಿ ಆಚರಿಸುತ್ತಿದ್ದ ಪದ್ದತಿ. ಹಾಗೆಯೆ ಪೇಗನ್ನರು ಹುಬಲ್ ಎಂಬ ಚಂದ್ರ ದೇವ ಸೇರಿದಂತೆ ೩೬೦ ವಿಗ್ರಹ ದೇವತೆಗಳನ್ನು ಪೂಜಿಸುವ ಸಮಯದಲ್ಲಿ  ಏಳು ಬಾರಿ ಪ್ರದಕ್ಷಿಣೆ ಹಾಕುತ್ತಿದ್ದರು. ಇಂದಿಗೂ ಈ ಪದ್ದತಿ ಕಾಬಾದಲ್ಲಿದೆ. ಆದರೆ ೩೬೦ ದೇವತೆಗಳ ಜಾಗದಲ್ಲಿ ಕಪ್ಪು ಕಲ್ಲಿದೆ ಅಷ್ಟೆ. ಅದಲ್ಲದೆ ಮೊಹರಮ್ ನ ಆಚರಣೆ, ಹಜ್ ಯಾತ್ರೆಯಲ್ಲಿ ಎರಡು ಗುಡ್ಡಗಳ ನಡುವೆ ಏಳು ಬಾರಿ ನಡೆಯುವದು, ಸೈತಾನನಿಗೆ ಕಲ್ಲೆಸೆಯುವದು, ಇವೆಲ್ಲವೂ ಇಸ್ಲಾಮಿಕ್ ಪೂರ್ವದ ಪೆಗನ್ನರ ಆಚರಣೆಗಳೆ. ಇಸ್ಲಾಮ್ ಇಂದು ಈ ಆಚರಣೆಗಳಿಗೆ ಬೇರೆಯ ಅರ್ಥ ಕೊಟ್ಟಿರಬಹುದು. ಆದರೆ ಈ ಆಚರಣೆಗಳು ಪೇಗನ್ನರಲ್ಲಿ ಮಾತ್ರ ವಿಗ್ರಹಾರಾಧನೆಯನ್ನು ಕೇಂದ್ರವನ್ನಾಗಿಸಿಯೇ ಆಚರಿಸಲ್ಪಟ್ಟಂತವುಗಳು. ಹೀಗೆ ಬಹಳಷ್ಟು ಆಚರಣೆಗಳು ಪೇಗನ್ ಆಚರಣೆಗಳ ಪಳೆಯುಳಿಕೆ ಎಂದು ಇತಿಹಾಸಕಾರರಾದ ಹೂಗೊ ವಿಂಕ್ಲರ್( Hugo Winckler) ಹಾಗೂ ರಾಬರ್ಟ್ ಮೂರೆ (Robert Morey) ಅಂತಹ ಅನೇಕರು ಅಭಿಪ್ರಾಯ ಪಡುತ್ತಾರೆ.
ಇನ್ನು ಕ್ರಿಶ್ಚಿಯಾನಿಟಿಯಲ್ಲಿಯೂ ಕೂಡ ಈಸ್ಟರ್ ಹಬ್ಬ ಬ್ಯಾಬಿಲೋನಿಯನ್ ದೇವತೆಯಾದ ’ಈಸ್ಟರ್’ ನಿಂದ ಬಂದಿದೆ. ಆ ದೇವತೆಯನ್ನು ಮೊಲದ ರೂಪದಲ್ಲಿ ಪೂಜಿಸುತ್ತಿದ್ದರು. ಕ್ರಿಸ್ಮಸ್ ಹಬ್ಬದ ಆಚರಣೆ ಕ್ರಿಶ್ಚಿಯನ್ ಪೂರ್ವದಲ್ಲಿ ಪೇಗನ್ನರು ಸೂರ್ಯದೇವನನ್ನು ಕುರಿತು ಆಚರಿಸುತ್ತಿದ್ದ ಹಬ್ಬ ಎಂದೂ ಹೇಳಲಾಗುತ್ತದೆ. ಯಾಕೆಂದರೆ ಡಿಸಂಬರ್ ೨೫ ಎನ್ನುವದು ಪೇಗನ್ನರ ಪ್ರಕಾರ Natalis Soli Invicti. ಅಂದರೆ ಅದು ಅಜೇಯನಾದ ಸೂರ್ಯನ ಹುಟ್ಟುಹಬ್ಬದ ದಿನ. ಈ ಬಗ್ಗೆ ಡ್ಯಾನ್ ಬ್ರೌನ್ ತನ್ನ ಪುಸ್ತಕ 'ಡಾ ವಿನ್ಸಿ ಕೋಡ್' ನಲ್ಲಿ ವಿಸ್ತ್ರತವಾಗಿ ಬರೆದಿದ್ದರಿಂದ ಬಹಳ ವಿರೋಧವನ್ನು ಎದುರಿಸಿತ್ತು.
ಹಾಗಾದರೆ 'ಈ ಪೆಗನ್ನರು ಯಾರು? ಇವರ ಕಾಲಮಾನ ಯಾವುದು?' ಈ ಪ್ರಶ್ನೆಗೆ ಉತ್ತರಿಸುವದು ಕಷ್ಟಕರ. ಪೇಗನ್ನರು ಅಂದರೆ ಯಾವುದೆ ನಿರ್ಧಿಷ್ಟ ರಾಷ್ಟ್ರ, ಜನಾಂಗಗಳಿಗೆ ಸೇರಿದವರಲ್ಲ. ಅತ್ಯಂತ ಪ್ರಾಚೀನ ಕಾಲದಿಂದ ಮಧ್ಯ ಏಷ್ಯಾದಿಂದ ಯುರೋಪ್ ವರೆಗೂ ಬೇರೆ ಬೇರೆ ಸಮುಧಾಯಗಳಲ್ಲಿ, ಆಚರಣೆಗಳಲ್ಲಿ ತೊಡಗಿಕೊಂಡಿದ್ದವರು. ಆಚರಣೆಗಳಲ್ಲಿ ಪೇಗನ್ನರು ಇಸ್ಲಾಂ ಕ್ರಿಶ್ಚಿಯಾನಿಟಿಯಂತೆ ರಿಲಿಜಿಯನ್ನುಗಳಲ್ಲ. ಅದೂ ಕೂಡ ಹಿಂದು ಸಂಸ್ಕೃತಿಯಂತೆ ಅನೇಕ ಸಾಂಪ್ರದಾಯಗಳ ಗೂಡು. ಇನ್ನು ಅನೇಕ ಆಚರಣೆಗಳಲ್ಲಿ ಹಿಂದೂ ಹಾಗೂ ಪೆಗನ್ನರ ಸಂಪ್ರದಾಯಗಳು ಸಾಮ್ಯತೆಯನ್ನೂ ಹೊಂದಿದೆ. ಉದಾರಣೆಗೆ ಪ್ರಕೃತಿಯ ಪೂಜೆ(ಚಂದ್ರ, ಸೂರ್ಯ, ಅಗ್ನಿಗೆ ನಮಿಸುವದು ಇತ್ಯಾದಿ ), ಶಬ್ದಗಳಲ್ಲಿನ ಭಾಷಾ ಸಾಮ್ಯತೆ, ಬಹುಮುಖ್ಯವಾಗಿ ನಕ್ಷತ್ರ ರಾಶಿ ಇವುಗಳ ಲೆಕ್ಕಾಚಾರ ಇತ್ಯಾದಿ. ಈ ಕಾರಣಕ್ಕಾಗಿಯೇ ಕೆಲವು ಇತಿಹಾಸಕಾರರು ಪೇಗನ್ ಮತ್ತು ಭಾರತೀಯ ಸಂಪ್ರದಾಯಗಳ ಉಗಮ ಒಂದೆ ಎಂದು ಅಭಿಪ್ರಾಯ ಪಡುವವರು ಇದ್ದಾರೆ. ಅದೇನೆ ಇರಲಿ, ಭಾರತೀಯ ಸಂಸ್ಕೃತಿಯಂತೆ ಸನಾತನವೂ, ವೈವಿಧ್ಯಮಯವೂ ಹಾಗೂ ಕಾಲಕಾಲಕ್ಕೆ ಬದಲಾವಣೆಗೆ ಒಳಪಟ್ಟ ಸಂಸ್ಕೃತಿಯೂ ಹೌದು. ಈಜಿಪ್ತ್, ಗ್ರೀಕ್ ಮಧ್ಯ ಏಷ್ಯಾದ ನಾಗರೀಕತೆಗಳ ಅನೇಕ ಸಂಪ್ರದಾಯಗಳನ್ನು, ನಂಬಿಕೆಗಳನ್ನು ತನ್ನೊಳಗೆ ಸೇರಿಸಿಕೊಂಡ ಸಂಸ್ಕೃತಿಯೇ ಪೆಗನ್. ಹಿಂದೂ ಸಂಪ್ರದಾಯದಂತೆ ಈ ಪೆಗನ್ನರು ಒಂದೆ ಆಧ್ಯಾತ್ಮಿಕ ತತ್ವಕ್ಕೆ ಬಂಧಿಸಲ್ಪಟ್ಟಿಲ್ಲ, ಅಥವಾ ಯಾವುದೋ ಒಂದು ಧರ್ಮಗ್ರಂಥ ಇಲ್ಲ. ಬಹುದೆವೋಪಾಸನೆಯೂ ಇತ್ತು, ಏಕದೇವೋಪಾಸನೆಯೂ ಇತ್ತು. ಹಾಗೆ ನೋಡಿದರೆ ಈ ಸಂಸ್ಕೃತಿಯನ್ನು 'ಪೇಗನ್' ಎಂಬ ಶಬ್ದದೊಳಗೆ ಬಂಧಿಸಿದ್ದು, ಹಾಗೂ ಆ ಪೆಗನ್ನರನ್ನು  'ಸುಳ್ಳು ರಿಲಿಜಿಯನ್' ಎಂದು ವ್ಯಾಖ್ಯಾನಿಸಿದ್ದು, ಸಂಪ್ರದಾಯಗಳಿಗೆ ಸಂಕುಚಿತ ಅರ್ಥ ಕೊಟ್ಟದ್ದು ಆ ಪೆಗನ್ನರಿಂದಲೇ ಜನ್ಮತಾಳಿದ ರಿಲಿಜಿಯನ್ನುಗಳು ಎನ್ನುವ ಸತ್ಯ ಇತಿಹಾಸದ ವ್ಯಂಗಗಳಲ್ಲೊಂದು.
ಇದಿಷ್ಟು ಪೆಗನ್ನರ ಬಗಗೆಗಿನ ಸಂಕ್ಷಿಪ್ತ ಮಾಹಿತಿ.
ವಿಗ್ರಹಾರಾಧನೆ, ಬಹುದೇವೋಪಾಸನೆಯನ್ನು ವಿರೋಧಿಸಿಯೂ ಅವುಗಳ ಆಚರಣೆಯನ್ನು ಅನುಸರಿಸುತ್ತಿರುವದು ಯಾಕೆ ಎನ್ನುವ ಪ್ರಶ್ನೆ ನಮ್ಮಲ್ಲಿ ಏಳುತ್ತದೆ. ಅದಕ್ಕೆ ಕಾರಣ ಡ್ಯಾನ್ ಬ್ರೌನ್ ನು 'ದಿ ಡಾ ವಿನ್ಸಿ ಕೋಡ್' ನಲ್ಲಿ ಹೀಗೆ ವಿವರಿಸಿದ್ದಾನೆ. 'ಜನರು ಬೇಗ ಹೊಸ ಮತಕ್ಕೆ ಹೊಂದಿಕೊಳ್ಳಲು ಹಳೆಯ ಆಚರಣೆಗಳನ್ನು ಬಿಡದೆ ಅನುಸರಿಸುವದು ಅವಶ್ಯಕವಾಗಿತ್ತು, ಹಾಗಾಗಿ ಅವು ಅಸ್ತಿತ್ವದಲ್ಲಿದೆ' ಎಂದು. ಅಂದರೆ ಪೆಗನ್ನರಿಂದಲೆ ಜನ್ಮ ತಾಳಿದ ಈ ರಿಲಿಜಿಯನ್ನುಗಳು ಇಂತಹ ಆಚರಣೆಗಳನ್ನು ಬಿಟ್ಟರೆ ತಮ್ಮ ಅಸ್ತಿತ್ವವನ್ನೇ ಕಳೆದುಕೊಳ್ಳುತ್ತವೆ.  ಆದರೆ ಮೂರ್ತಿಪೂಜೆಯೇ ಹಾಸುಹೊಕ್ಕಗಿರುವ ಈ ಎಲ್ಲಾ ಸಂಪ್ರದಾಯಗಳು ಮೂರ್ತಿಪೂಜೆಯನ್ನು ಅಲ್ಲಗೆಳೆಯುವದರಿಂದ ತಮ್ಮ ಅರ್ಥವನ್ನೇ ಕಳೆದುಕೊಳ್ಳುತ್ತದೆ.
ಇವಿಷ್ಟೆಲ್ಲಾ ಮನವರಿಕೆ ಮಾಡಿಕೊಳ್ಳುವ ಅಗತ್ಯ ಇಂದು ಯಾಕಿದೆಯೆಂದರೆ, ನಾವಿಲ್ಲಿ ಸಂಸ್ಕೃತಿಯಲ್ಲಿನ ಬಹುತ್ವದ ನಿಜವಾದ ಅರ್ಥವನ್ನು ಕಂಡುಕೊಳ್ಳಬಹುದು. ಯಾಕೆಂದರೆ ಸಂಸ್ಕೃತಿ, ಆಚರಣೆಗಳು ಒಂದು ಪುಸ್ತಕದ ವ್ಯಾಖ್ಯಾನಕ್ಕೆ ಸೀಮಿತವಾದರೆ ನಡೆಯಬಹುದಾದ ಆಧ್ವಾನಕ್ಕೆ ನಮ್ಮ ಕಾಲ ಸಾಕ್ಷಿಯಾಗಿದೆ. ವಿಗ್ರಹಗಳು ಸೈತಾನನ ಸೃಷ್ಟಿ ಎನ್ನುವ ನಂಬಿಕೆಯಿಂದ ಸಾವಿರಾರು ದೇಗುಲಗಳು, ಸೂಫಿ ಶ್ರದ್ಧಾಕೇಂದ್ರಗಳು, ಬುದ್ಧನ ಪ್ರತಿಮೆಗಳು ದ್ವಂಸವಾಗಿವೆ.  ವಿಗ್ರಹಪೂಜೆ ಸೈತಾನನ ಸೃಷ್ಟಿಯೊ ಅಲ್ಲವೊ ಆದರೆ ವಿಗ್ರಹದ ದ್ವಂಸ, ನಂಬಿಕೆಯ ಅವಹೇಳನ ಮಾತ್ರ ಸೈತಾನನ ಸೃಷ್ಟಿ ಎನಿಸದಿರದು. ಮೂರ್ತಿ ಪೂಜೆಯನ್ನು ದ್ವೇಷಿಸುವ ಕಟ್ಟಾ ಅನುಯಾಯಿಗಳಿಗೆ ತಮ್ಮ ಪ್ರತಿ ಹಬ್ಬ, ಸಂಪ್ರದಾಯಗಳು ಮೂರ್ತಿಪೂಜೆಯ ಸಂಸ್ಕೃತಿಯಿಂದಲೇ ಜನ್ಮ ತಾಳಿದ್ದು ಎಂಬ ಕನಿಷ್ಟ ತಿಳುವಳಿಕೆ ಇಲ್ಲದಿರುವದು ಅಜ್ನಾನದ ಪರಮಾವಧಿ ಮಾತ್ರ.
ವಿಗ್ರಹಾರಾಧನೆ,  ಪ್ರಕೃತಿಪೂಜೆಗಳು ಮೂಢನಂಬಿಕೆ, ತಪ್ಪು ಎನ್ನುವ ತಪ್ಪು ತಿಳುವಳಿಕೆ ಕೇವಲ ಈ ರಿಲಿಜಿಯನ್ನುಗಳಿದ್ದು ಮಾತ್ರವಲ್ಲ. ಈ ರಿಲಿಜಿಯನ್ನುಗಳ ವ್ಯಾಖ್ಯಾನಗಳನ್ನು ಎರವಲು ಪಡೆದುಕೊಂಡ ಸೆಕ್ಯುಲರ್ ಚಿಂತನೆ ಕೂಡ. ಯಾಕೆಂದರೆ ಈ ಸೆಕ್ಯುಲರ್ ಚಿಂತನೆ ಹುಟ್ಟಿಕೊಂಡಿದ್ದೇ ರಿಲಿಜಿಯನ್ನುಗಳ ತತ್ವವನ್ನು ಆಶ್ರಯಿಸಿ ಎನ್ನಬಹುದು. ಹಾಗಾಗಿ ಇಂದು ಅನೇಕ ಬುದ್ಧಿಜೀವಿಗಳು ವಿಗ್ರಹಾರಾಧನೆಯನ್ನು ಅವೈಜ್ನಾನಿಕ ಎಂದು ಕರೆಯುವದಕ್ಕೆ ಮೂಲ ಕಾರಣ ಸೆಮಿಟಿಕ್ ರಿಲಿಜಿಯನ್ ಗಳ ತತ್ವದ ಮೂಲಕ ಭಾರತೀಯ ಸಂಸ್ಕೃತಿಯನ್ನು ಅಭ್ಯಯಿಸಿದ್ದೇ ಆಗಿದೆ. 
ಯಾವುದೇ ಸಂಸ್ಕೃತಿ ಕೇವಲ ತತ್ವಕ್ಕೆ ಸೀಮಿತವಾಗಿದ್ದರೆ ಅದು ಬಹಳ ಜನರನ್ನು ತಲುಪಲಾರದು. ಇಲ್ಲಿ ನಂಬಿಕೆ ಮೂಢನಂಬಿಕೆಗಳ ಪ್ರಶ್ನೆಗಿಂತ ಒಂದು ಸಂಸ್ಕೃತಿ ಸಂಪ್ರದಾಯ, ಆಚರಣೆಗಳ ಮೂಲಕ ಯಾವ ರೀತಿಯಲ್ಲಿ ಹಲವು ತಲೆಮಾರುಗಳಿಗೆ ಜ್ನಾನವನ್ನು ವರ್ಗಾಯಿಸಬಲ್ಲದು ಎನ್ನುವದು ಮುಖ್ಯ. ವಿಗ್ರಹಪೂಜೆ ಆಸ್ತಿಕನಿಗೆ ನಂಬಿಕೆಯಾಗಿರಬಹುದು,  ಭಕ್ತಿಯ ಕೇಂದ್ರವಾಗಿರಬಹುದು. ಕಲೆಗಾರನಿಗೆ, ಶಿಲ್ಪಿಗೆ ಕಲೆಯ ವಸ್ತುವಾಗಿರಬಹುದು, ಕವಿಗೆ ಕವಿತೆಯ ವಸ್ತುವಾಗಿರಬಹುದು. ಇಲ್ಲೆಲ್ಲಿಯೂ ಇರದ ಸೈತಾನ ಕಾಣಿಸಿಕೊಳ್ಳುವದು ಈ ವಿಗ್ರಹವನ್ನು ದ್ವಂಸಗೊಳಿಸಿದಾಗ ಮಾತ್ರ. ಪ್ರಕೃತಿಗೆ ನಮಿಸುವದು ಮೂಢನಂಬಿಕೆಯೊ, ಅವೈಜ್ನಾನಿಕವೊ ಎನ್ನುವದಕ್ಕಿಂತಲೂ ಆ ಆಚರಣೆ ನಮಗೆ ಪ್ರಕೃತಿಯನ್ನು ಚೆನ್ನಾಗಿ ಕಾಯ್ದುಕೊಳ್ಳುವದನ್ನು ತಿಳಿಸಿಕೊಟ್ಟರೆ ಅದು ಒಳಿತೆ ಅಲ್ಲವೆ? ವಿಗ್ರಹಾರಾಧನೆ, ಬಹುದೇವತೆಯ ಆರಾಧನೆ ಅವೈಜ್ನಾನಿಕವೊ, ಅಥವಾ ಸತ್ಯದೇವನ ಆಚರಣೆಯಲ್ಲ ಎಂದು ಬಡಿದಾಡಿಕೊಳ್ಳುವದಕ್ಕಿಂತಲೂ ಆ ಆಚರಣೆ ಪರಸ್ಪರ ಪ್ರೀತಿಯಿಂದ ಒಂದೆಡೆ ಸೇರಿ ಆಚರಿಸುವದನ್ನು ಕಲಿಸಿದರೆ ಅದಕ್ಕಿಂತಲೂ ಮುಖ್ಯವಾದದ್ದು ಏನು?


Comments

  1. Balu...it's a great information about paygons and there practices which eventually turned into practice of semetic religions..wish to know more about paygons...Can you?

    ReplyDelete

Post a Comment

Popular Posts