ಹೀಗೊಂದು ಊರಿನ ಕತೆ

ಅದೊಂದು ಊರು. ಬಡವ-ಬಲ್ಲಿದ, ಬುದ್ದಿವಂತ, ದಡ್ಡ ಎಲ್ಲರೂ ಇದ್ದ ಊರು. ಆ ಊರಿಗೆ
ದರೋಡೆಕೋರರ ಕಾಟ. ಹಿಂಸೆ, ಬಲಾತ್ಕಾರ, ದೋಚುವದು ಇವೆಲ್ಲವನ್ನೂ ಮಾಡುತ್ತಿದ್ದರು.
ದರೋಡೆಕೊರರನ್ನು ಎದುರಿಸುವದಕ್ಕೆ ಭಯಪಟ್ಟ ಕೆಲವು ಚಿಂತಕರು ದರೋಡೆಕೋರರ ಜೊತೆ
ಸಂಧಾನಕ್ಕಿಳಿಯುವ ದಾರಿಯನ್ನು ಯೋಚಿಸಿದರು. ಕೆಲವು ಸಾಹಸಿಗಳು ಧಾಳಿಕೋರರಿಗೆ ಅವರದೇ
ರೀತಿಯಲ್ಲಿ ಉತ್ತರಿಸುವ ಯೋಜನೆ ಹಾಕಿಕೊಂಡರು.
ಒಮ್ಮೆ ದರೋಡೆಕೋರರು ಹಳ್ಳಿಗೆ ಧಾಳಿಯಿಟ್ಟರು. ಚಿಂತಕರು ವಿದ್ಯಾವಂತರೇನೊ ಹೌದು. ಆದರೆ
ದರೋಡೆಕೋರರನ್ನು ಎದುರಿಸುವ ಧೈರ್ಯ ಇರಲಿಲ್ಲ. ಹೆದರಿ ಬಾಗಿಲು ಹಾಕಿಕೊಂಡರು.
ದರೋಡೆಕೋರರು ಬಗ್ಗದಿದ್ದಾಗ ಚಿಂತಕರು ಊರಿನ ಸಂಪತ್ತನಲ್ಲಿ ಕೆಲವು ಭಾಗವನ್ನು
ಹಂಚಿಕೊಳ್ಳುವ ಒಪ್ಪಂದದೊಂದಿಗೆ ಪ್ರಾಣವನ್ನು ಉಳಿಸಿಕೊಂಡರು. ಆದರೆ ಊರಿನ ಕೆಲ
ಸಾಹಸಿಗಳು ದರೋಡೆಕೋರರ ಜೊತೆ ಹೋರಾಡಿದರು. ಎರಡೂ ಕಡೆ ಪ್ರಾಣ ಹಾನಿ ಸಂಭವಿಸಿತು.
ಇದೆಲ್ಲದಕ್ಕೂ ಚಿಂತಕರ ಮನೆಯ ಮುಚ್ಚಿದ ಬಾಗಿಲುಗಳೆ ಪ್ರೇಕ್ಷಕರಾದವು. ಹಾಗೂ ಹೀಗೂ
ಊರಿನ ಹೋರಾಟಗಾರರು ದರೋಡೆಕೋರರನ್ನು ಬಗ್ಗು ಬಡಿದರು. ಕೆಲವು ದರೋಡೆಕೋರರು ಓಡಿ
ಹೋದರು. ಸೆರೆಸಿಕ್ಕ ದರೋಡೆಕೋರರನ್ನು ತಳಿಸಲಾಯಿತು. ಊರು ದರೋಡೆಕೋರರಿಂದ ಮುಕ್ತಿ
ಹೊಂದಿ ಉಸಿರಾಡುವಂತಾಯಿತು. ಊರಿನ ವಾತಾವರಣ ತಿಳಿಯಾಯಿತು.
ಈಗ ಚಿಂತಕರು ಮನೆಯ ಬಾಗಿಲನ್ನು ತೆರೆದು ಹೊರಬಂದರು. ಊರಿನ ಜನರಿಂದ
ತಳಿಸಲ್ಪಡುತ್ತಿದ್ದ ದರೋಡೆಕೋರರನ್ನು ನೋಡಿದರು. ಕೂಡಲೇ ದರೋಡೆಕೋರರ ಮೇಲೆ
ನಡೆಯುತ್ತಿದ್ದ ಹಲ್ಲೆಯನ್ನು ವಿರೋಧಿಸಿದರು. ಈ ಊರಿನಲ್ಲಿ ಮಾನವೀಯ ಹಕ್ಕುಗಳ
ಉಲ್ಲಂಗನೆಯಾಗುತ್ತಿದೆಯೆಂದು ಆಪಾದಿಸಿದರು. ಮಾನವೀಯತೆಯ ಪಾಠ ಹೇಳಿದರು.ಅವರನ್ನು
ಬಲಿಪಶುಗಳೆಂದು ಸಂತೈಸಲಾಯಿತು. ಕ್ರಮೇಣ ದರೋಡೆಕೋರರನ್ನು ಸಾಮಜಿಕ ವಲಯದಲ್ಲಿ
ಸಂತೈಸುವದು, ಅವರ ಹಕ್ಕು, ಅಭಿವೃದ್ಧಿ, ಕಲ್ಯಾಣಗಳ ಕುರಿತ ಆಂದೋಲನಗಳು ಆ ಊರಿನ
ಸಮಾಜಮುಖಿ ಬೆಳವಣಿಗೆಯಾಗಿ ಮಾರ್ಪಾಟಾಯಿತು. ಆ ಊರಿನ ಕೆಲವು ಭಾಗಗಳನ್ನು
ದರೋಡೆಕೋರರಿಗೆ ಸ್ವತಂತ್ರವಾಗಿ ಬಿಟ್ಟುಕೊಡುವಂತೆ ಒತ್ತಡ ಹೇರಿದರು.
ದರೋಡೆಕೋರರಿಗಾಗಿಯೇ ಅವರಿಗೆ ಒಪ್ಪಿತವಾದ ನ್ಯಾಯಾಂಗಕ್ಕೆ ಅವಕಾಶ ಒದಗಿಸಬೇಕೆಂದು
ಒತ್ತಾಯಿಸಲಾಯಿತು. ದರೋಡೆಕೋರರನ್ನು ವಿರೋಧಿಸುವವರನ್ನು ಮನುಷ್ಯ ವಿರೋಧಿ ಎಂದು
ಕರೆಯಲಾಯಿತು. ಆ ಊರಿನ ರಾಜಕೀಯ ಹಿತಾಸಕ್ತಿ ಹಾಗೂ ಪೈಪೋಟಿಯೆ ಇವೆಲ್ಲಕ್ಕೂ ಕಾರಣ
ಎನ್ನುವದು ನಿರ್ವಿವಾದವಾಗಿತ್ತು.
ಇಷ್ಟಕ್ಕೆ ಮುಗಿಯಲಿಲ್ಲ.
ಈ ಸಾಮಾಜಿಕ ಬದಲಾವಣೆ ಆ ಊರಿನ ಸಾಂಸ್ಕೃತಿಕ, ಐತಿಹಾಸಿಕ ಸಂಗತಿಗಳನ್ನು ಸಂಪೂರ್ಣ
ದೋಚಿತ್ತು. ಬದಲಾಗಿ ಹೊಸದೊಂದು ಇತಿಹಾಸ ಹಾಗೂ ಸಾಮಾಜಿಕ ಚಿತ್ರಣ ತೆರೆಯಲ್ಪಟ್ಟಿತ್ತು
ದರೋಡೆಕೋರರು ದೋಚಿದ್ದು ಸಾಮಾಜಿಕ ಅಸಮಾನತೆಯ ವಿರುದ್ಧ ಅವರ ಹೋರಾಟವಾಗಿತ್ತೆಂದೂ
ಹೇಳಲಾಯಿತು. ಅದಕ್ಕೆ ಕಾರಣ ಆ ಊರಿನಲ್ಲಿ ಸಾವಿರಾರು ವರ್ಷಗಳಿಂದ ನಡೆಯಲ್ಪಟ್ಟಿದ್ದ
ದೌರ್ಜನ್ಯವೇ ಕಾರಣ ಎನ್ನಲಾಯಿತು. ಅದಕ್ಕೆ ಪೂರಕವಾಗಿ ಆ ಊರಿನಲ್ಲಿ ಪ್ರಚಲಿತವಿದ್ದ
ಜಾನಪದ ಕಥೆಗಳು,ಗೀತೆಗಳು, ರೂಢಿಯಲ್ಲಿ ಬಳಕೆಯಲ್ಲಿದ್ದ ಗಾದೆಮಾತುಗಳು ಸಾಕ್ಷಗಳಾದವು.
ಆ ಊರಿನ ಗ್ರಾಮ್ಯ ಕಥೆಗಳಲ್ಲಿ ಹೇಳಲ್ಪಟ್ಟ ಸನ್ನಿವೇಶ ವೈಪರೀತ್ಯಗಳು, ಜಗಳ,
ಭಿನ್ನಾಭಿಪ್ರಾಯಗಳನ್ನು ಕ್ರಾಂತಿಯೆಂದು ಬಿಂಬಿಸಿ, ಆ ಕ್ರಾಂತಿಯು ಫ್ರಾನ್ಸ್ ಹಾಗೂ
ರಷ್ಯಾದಲ್ಲಿ ನಡೆದ ಕ್ರಾಂತಿಗೆ ಸಮಾನವಾದುದೆಂದು ಚಿತ್ರಿಸಲಾಯಿತು. ಆ ಊರಿನಲ್ಲಿ
ಪ್ರಚಲಿತವಾಗಿದ್ದ ಜಾನಪದ ಕಥೆಗಳು, ಗೀತೆಗಳು ’ಐತಿಹಾಸಿಕ ದೌರ್ಜನ್ಯದ’ ಚಿತ್ರಣಕ್ಕೆ
ಹೊಸ ಆಯಾಮವನ್ನು ಕೊಟ್ಟವು. ಕ್ರಮೇಣ ಆ ಜಾನಪದ ಕಥೆಗಳು ಇತಿಹಾಸದ
ಕನ್ನಡಿಯಾಯಿತು.ಅಲ್ಲೆಲ್ಲೊ ಇದ್ದ ಸ್ತ್ರೀವಾದಿಗಳು ಈ ಜಾನಪದ ಸಾಹಿತ್ಯವು ಆ
ಊರಿನಲ್ಲಾದ ಮಹಿಳೆಗಾದ ಅನ್ಯಾಯವನ್ನು ಬಿಂಬಿಸುತ್ತದೆ ಎಂದರು. ಆ ಜಾನಪದ ಕಥೆಗಳಿಗೆ
ವ್ಯತಿರಿಕ್ತವಾದ ಸಾಹಿತ್ಯಗಳು ಬಂಡಾಯ ಸಾಹಿತ್ಯವೆಂಬಂತೆ ಹೊರಬಂದವು. ಜಾನಪದ
ಕತೆಗಳಲ್ಲಿ ಚಿತ್ರಿತವಾದ ’ವ್ಯಕ್ತಿತ್ವದ’ ವಿರೋಧಾಭಾಸವೆನಿಸುವ ವ್ಯಕ್ತಿತ್ವದ
ಕಲ್ಪನೆಗಳು ಹೊಸ ಸಾಹಿತ್ಯದ ಮೂಲಕ ಪಠ್ಯವಾದವು. ಇದನ್ನು ಆ ವಿವಿಧ ದೌರ್ಜನ್ಯಗಳ
ವಿರುದ್ಧ ಹೋರಾಟದ ಧ್ಯೋತಕವೆಂಬಂತೆ ಸೃಷ್ಟಿಸಲಾಯಿತು. ಹಾಗೂ ಇದನ್ನು ಬರಹಗಾರನ
ಸ್ವಾತಂತ್ರ್ಯದ ಹಿನ್ನೆಲೆಯಲ್ಲಿ ಆಧುನಿಕ ಮನೋಭಾವದ ಅಲೆಯೆಂಬಂತೆ, ದೌರ್ಜನ್ಯ ಹಾಗೂ
ಹೆಪ್ಪುಗಟ್ಟಿದ ಸಮಾಜ ವಿರುದ್ಧ ನಿಂತ ಚೈತನ್ಯವೆಂಬಂತೆ ಸ್ವೀಕೃತವಾಯಿತು. ಆದರೆ ಆ
ಹಳೆಯ ಜಾನಪದ ಸಾಹಿತ್ಯಗಳ ಮೂಕ ಕಾಲ್ಪನಿಕ ವ್ಯಕ್ತಿ ಚಿತ್ರಣಗಳು
ಬಹುಷಃ ಹೊಸ ಸಾಹಿತ್ಯದಲ್ಲಿ ಮೂಡಿಬಂದ ತಮ್ಮದೇ ಇನ್ನೊಂದು ಚಿತ್ರಣವನ್ನು
ಕಲ್ಪಿಸಿಕೊಳ್ಳಲಾರದಷ್ಟು ಅತ್ಪ್ರೇಕ್ಷೆಯಾಗಿತ್ತೇನೊ ಈ ನವ ಸಾಹಿತ್ಯದಲ್ಲಿನ ನಿರೂಪಣೆ.
ಇಂತಹ ಸಾಹಿತಿಗಳಿಗೆ ಪ್ರಶಸ್ತಿಗಳು ಹುಡುಕಿಕೊಂಡು ಬಂದವು ಎಂಬುದನ್ನು ಬೇರೆ
ಹೇಳಬೇಕಿಲ್ಲ. ಈ ಎಲ್ಲವನ್ನೂ ವಿರೋಧಿಸುವವನನ್ನು ಫ್ಯಾಸಿಸ್ಟ್ ಎಂದು ಕರೆಯಲಾಯಿತು.
ಇದಿಷ್ಟು ಆ ಊರಿನ ಪ್ರಚಲಿತ ವಿದ್ಯಾಮಾನ.
ಆ ಊರಿನಲ್ಲಿ ಎಷ್ಟೊ ವರ್ಷಗಳಿಂದ ಬದುಕಿದ್ದ ಒಣ ಮರವನ್ನು ಕೇಳಿದೆ. "ಈ ಊರು ಮೊದಲು
ಹೇಗಿತ್ತು? ಜನ ಹೇಗಿದ್ದರು" ಎಂದು.
ಅದಕ್ಕೆ ಮರ ಹೇಳಿತು. "ಈ ಊರಿನಲ್ಲಿ ’ಹೀಗೆ’ ಇರಬೇಕಿತ್ತೆಂದು ಇರಲಿಲ್ಲ. ಹಾಗಾಗಿ
’ಹೀಗೆಯೇ’ ಇತ್ತೆಂದು ಹೇಳಲಾರೆ. ಹೇಗೆ ಬೇಕೊ ಹಾಗಿತ್ತು. ಆದರೆ ಈಗ ಈ ಊರು ವರ್ತಮಾನದ
ರಾಜಕೀಯ ಅಗತ್ಯತೆಯನ್ನು ಇತಿಹಾಸದಲ್ಲಿಟ್ಟು ರೂಪಿಸುತ್ತಿದೆ" ಎಂದಿತು.
ಕತೆ ಮುಗಿಯಲಿಲ್ಲ. ಮುಂದುವರಿಯುತ್ತಲೇ ಇದೆ.

Comments